ದಾವಣಗೆರೆ ಜ.6- ಗ್ರಾಮೀಣ ಭಾಗದಲ್ಲಿ ಅಂಗನವಾಡಿ ಕೇಂದ್ರಗಳನ್ನು ಸ್ವಂತ ಕಟ್ಟಡದಲ್ಲಿ ನಡೆಸಬೇಕು. ಈ ಬಗ್ಗೆ ಶಾಸಕರು ಮತ್ತು ಎಂಪಿ ಅವರು ತಮ್ಮ ಅನುದಾನದಲ್ಲಿ ಅಥವಾ ಇನ್ನಿತರೆ ಅನುದಾನದಲ್ಲಿ ಸ್ವಂತ ಕಟ್ಟಡ ಹೊಂದುವ ಬಗ್ಗೆ ಕ್ರಮ ವಹಿಸುವಂತೆ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್‍ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ಸೂಚಿಸಿದರು.
ನಗರದ ಜಿಲ್ಲಾ ಪಂಚಾಯತ್ ಮುಖ್ಯ ಸಭಾಂಗಣದಲ್ಲಿ ಇಂದು ಸಂಜೆ ತಮ್ಮ ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲಾ ಪಂಚಾಯತ್ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡುತ್ತಾ, ನರೇಗಾ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ತಲಾ ರೂ.5 ಲಕ್ಷ ಮ್ಯಾಚಿಂಗ್ ಗ್ರಾಂಟ್‍ನಲ್ಲಿ ಕಟ್ಟಡ ನಿರ್ಮಿಸು ವಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಉಪ ನಿರ್ದೇಶಕ ವಿಜಯಕುಮಾರ್ ಗೆ ತಾಕೀತು ಮಾಡಿದರು.
250 ಅಂಗನವಾಡಿ ಕೇಂದ್ರಗಳ ರಿಪೇರಿ ಕೆಲಸಕ್ಕೆ ಪಿಆರ್‍ಇಡಿ ಅವರು ಜನವರಿ ಬಂದರೂ ಎಸ್ಟಿಮೇಟ್ ಸಿದ್ದಪಡಿಸಿಲ್ಲ. ಯಾಕಿಷ್ಟು ವಿಳಂಬ ಮಾಡಿದ್ದೀರಾ?. ಇನ್ನು ಒಂದು ತಿಂಗಳ ಒಳಗೆ ಈ 250 ಅಂಗನವಾಡಿ ಕೇಂದ್ರಗಳನ್ನು ರಿಪೇರಿ ಮಾಡಬೇಕು ಎಂದು ಗಡುವು ನೀಡಿದರು.
ವಿಜಯಕುಮಾರ್ ಮಾತ ನಾಡಿ, ಜಿಲ್ಲೆಯಲ್ಲಿ ಒಟ್ಟು 1723 ಅಂಗನವಾಡಿ ಕೇಂದ್ರಗಳಿದ್ದು ನಗರದಲ್ಲಿ 344 ಮತ್ತು ಗ್ರಾಮೀಣ ಭಾಗದಲ್ಲಿ 1379 ಕೇಂದ್ರಗಳಿವೆ. ಈ ಪೈಕಿ ನಗರದಲ್ಲಿ 53 ಮತ್ತು ಗ್ರಾಮೀಣ ಭಾಗದಲ್ಲಿ 253 ಕೇಂದ್ರಗಳು ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿವೆ. ಪ್ರಸಕ್ತ ಸಾಲಿನಲ್ಲಿ 250 ಸ್ವಂತ ಕಟ್ಟಡಗಳಿಗೆ ತಲಾ ರೂ.50 ಸಾವಿರ ವೆಚ್ಚದಲ್ಲಿ ರಿಪೇರಿ ಕೆಲಸಕ್ಕೆ ಪಿಆರ್‍ಇಡಿಗೆ ಆದೇಶಿಸಲಾಗಿದೆ ಎಂದು ಮಾಹಿತಿ ನೀಡಿದರು.
ಶಾಲಾ ಮಕ್ಕಳಿಗೆ ನಲ್ಲಿಯಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಮಾಡಲು ಕಾರ್ಯಪಾಲಕ ಅಭಿಯಂತರರ ಜೊತೆ ಸಹಕರಿಸುವಂತೆ ಡಿಡಿಪಿಐಗೆ ಸೂಚಿಸಿದರು.
ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಯಡಿ ಹರಿಹರ ಮತ್ತು ಜಗಳೂರಿನಲ್ಲಿ ಪ್ರಗತಿ ಕಡಿಮೆ ಆಗಿದ್ದು, ನಿಗದಿತ ಗುರಿ ಸಾಧಿಸಲು ಕ್ರಮ ವಹಿಸಬೇಕೆಂದರು.