ಚನ್ನಗಿರಿ, ಜ.6- ಕೂಡಲ ಸಂಗಮ ಲಿಂಗಾಯತ ಪಂಚಮಸಾಲಿ ಜಗದ್ಗುರು ಶ್ರೀ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಹಮ್ಮಿಕೊಂಡಿರುವ ಪಂಚ ಲಕ್ಷ ಹೆಜ್ಜೆಗಳ ಪಾದಯಾತ್ರೆಯ ಪೂರ್ವಭಾವಿ ಸಮಾವೇಶ ದಿ.ಜೆ.ಹೆಚ್. ಪಟೇಲ್ ಅವರ ಜನ್ಮಭೂಮಿ ಚನ್ನಗಿರಿ ತಾಲ್ಲೂಕಿನ ಕಾರಿಗನೂರು ಕ್ರಾಸ್ ಬಳಿ ಬುಧವಾರ ನಡೆಯಿತು.
ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಜಯಮೃತ್ಯುಂಜಯ ಶ್ರೀಗಳು, ದೇಶಕ್ಕೆ ಅನ್ನ ನೀಡುವ ರೈತನ ಮಕ್ಕಳು ಮೀಸಲಾತಿಯಿಂದ ವಂಚಿತರಾಗಿದ್ದಾರೆ. ಈ ಕಾರಣಕ್ಕಾಗಿಯೇ ನಾವು ಪಾದಯಾತ್ರೆ ಹಮ್ಮಿಕೊಂಡಿದ್ದೇವೆ ಎಂದು ಹೇಳಿದರು.
ರಾಜ್ಯದಲ್ಲಿ ಸುಮಾರು 90 ಲಕ್ಷ ಜನ ಸಂಖ್ಯೆ ಹೊಂದಿರುವ ಪಂಚಮಸಾಲಿ ಸಮಾಜ ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಹಿಂದುಳಿದಿದೆ. ಸಮಾಜವನ್ನು ಮೇಲೆತ್ತಬೇಕಾ ದರೆ 2ಎ ಮೀಸಲಾತಿ ಅತ್ಯಗತ್ಯ ಎಂದು ಶ್ರೀಗಳು ನುಡಿದರು. ಇದರೊಟ್ಟಿಗೆ ಲಿಂಗಾ ಯಿತ ಹಾಗೂ ಇತರೆ 75 ಉಪಜಾತಿಗಳಿಗೆ ಕೇಂದ್ರ ಸರ್ಕಾರದ ಒಬಿಸಿ ಮೀಸಲಾತಿಗೆ ರಾಜ್ಯ ಸರ್ಕಾರ ಶಿಫಾರಸ್ಸು ಮಾಡಬೇಕು ಎಂದು ಆಗ್ರಹಿಸಿದರು. ಕೂಡಲ ಸಂಗಮ ಇಂದು ಅಂತರರಾಷ್ಟ್ರೀಯ ತಾಣವಾಗಲು ದಿ.ಜೆ.ಹೆಚ್.ಪಟೇಲ್ ಅವರ ಕೊಡುಗೆ ಅಪಾರವಾಗಿದೆ ಎಂದು ಶ್ರೀಗಳು ಸ್ಮರಿಸಿದರು.
ಜಿಲ್ಲಾ ಪಂಚಾಯ್ತಿ ಸದಸ್ಯ ತೇಜಸ್ವಿ ಪಟೇಲ್ ಮಾತನಾಡುತ್ತಾ, ಪಂಚಮಸಾಲಿ ಸಮಾಜದ ಮೇಲೆ ದೌರ್ಜನ್ಯ ನಡೆದರೆ ನಾನೇ ಮೊದಲು ಗುರಾಣಿಯಾಗಿ ಹೊರಾಡುತ್ತೇನೆ ಎಂದರು.
ರಾಷ್ಠ್ರೀಯ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ್, ಮಹಾನಗರ ಪಾಲಿಕೆ ಮೇಯರ್ ಬಿ.ಜೆ. ಅಜಯ್ ಕುಮಾರ್, ಹೆಚ್.ಎಸ್.ನಾಗರಾಜ್, ಮಲ್ಲಿಕಾರ್ಜುನ್ ಹಿರೇಕೊಪ್ಪ, ಉಜ್ಜಪ್ಪ ಕಾರಿಗನೂರು, ಚಂದ್ರಣ್ಣ, ಕರಿಯಪ್ಪ, ಕಲ್ಲೇಶಪ್ಪ, ಶ್ರೀಧರ್ ಪಾಟೀಲ್, ಮಂಜುಳಮ್ಮ, ರುದ್ರಮ್ಮ ಹಾಗು ಇತರರು ಉಪಸ್ಥಿತರಿದ್ದರು.