ದಾವಣಗೆರೆ, ಜ.6- ಕನ್ನಡ ಸಾಹಿತ್ಯದಲ್ಲಿ ತಾನು ರಚನೆಯಾದ ಕಾಲಕ್ಕೇ ಸಂಸ್ಕೃತ, ಮಲೆಯಾಳಿ, ಮರಾಠಿ, ತಮಿಳು ಭಾಷೆಗಳಲ್ಲಿ ಭಾಷಾಂತರವಾದ ಮಹಾಕಾವ್ಯಗಳಲ್ಲಿ ಮೊದಲನೆಯ ಕೃತಿ ಚಾಮರಸ ಕವಿಯ ಪ್ರಭುಲಿಂಗಲೀಲೆ, ಹದಿನೈದನೆಯ ಶತಮಾನದಲ್ಲಿ ಬಸವ ಅಕ್ಕ ಅಲ್ಲಮರಾದಿಯಾಗಿ ಶಿವಶರಣರ ಕುರಿತು ರಚಿತವಾದ ಈ ಕೃತಿ ಒಂದು ಪ್ರಾಸಾಧಿಕವಾದ ಶೈಲಿ ಹಾಗೂ ಭಾಮಿನಿ ಷಟ್ಪದಿಯಲ್ಲಿ ರಚಿತವಾಗಿದೆ.
ಇದು ಈ ಕೃತಿಯ ಶ್ರೇಷ್ಠತೆಗೆ ಹಿಡಿದ ಕನ್ನಡಿಯಾಗಿದೆ ಎಂದು ಶಿವಮೊಗ್ಗ ಬಸವ ಕೇಂದ್ರ ಹಾಗೂ ಚಿಕ್ಕಮಗಳೂರು ಬಸವ ಮಂದಿರದ ಶ್ರೀ ಡಾ. ಬಸವ ಮರುಳಸಿದ್ದ ಸ್ವಾಮೀಜಿ ತಿಳಿಸಿದರು.
ನಗರದ ಗ್ರಂಥ ಸರಸ್ವತಿ ಪ್ರತಿಭಾರಂಗವು ತನ್ನ ಕನ್ನಡಕಬ್ಬ ಉಗಾದಿ ಹಬ್ಬ ಕಾರ್ಯಕ್ರಮದಡಿ 2021 ರ ನೂತನ ವರ್ಷ ಜನವರಿ 1 ರಿಂದ ಡಿಸೆಂಬರ್ ವರ್ಷಾಂತ್ಯ 31 ರವರೆಗೆ ವರ್ಷಂಪೂರ್ತಿ ಹಮ್ಮಿಕೊಂಡಿರುವ ಅಂತರ್ಜಾಲಿತ ಶತಮಾನದ ಕನ್ನಡ ಕಾವ್ಯವಾಚನ ನಿತ್ಯೋತ್ಸವ ಸಮಾರಂಭದ ದಿವ್ಯಸಾನಿಧ್ಯ ವಹಿಸಿ ಶ್ರೀಗಳು ಆಶೀರ್ವಚನ ನೀಡಿದರು. ಪ್ರಭುಲಿಂಗಲೀಲೆಯ ಕೆಲವು ಚರಣಗಳನ್ನು ವಾಚಿಸುವ ಮೂಲಕ ಕಾವ್ಯವಾಚನ ಕಾರ್ಯ ಕ್ರಮಕ್ಕೆ ಚಾಲನೆ ನೀಡಿದರು.
ಗ್ರಂಥ ಸರಸ್ವತಿ ಪ್ರತಿಭಾ ರಂಗದ ಅಧ್ಯಕ್ಷ ಆರ್.ಶಿವಕುಮಾರಸ್ವಾಮಿ ಕುರ್ಕಿ ಅವರು ಮಾತನಾಡಿ, ಇಂದಿನಿಂದ ಮುಂದಿನ 365 ದಿನಗಳ ಕಾಲ ನೂರಾರು ಕವಿಗಳ ಕಾವ್ಯಗಳನ್ನು ವಿವಿಧ ಮಠಗಳ ಸ್ವಾಮೀಜಿಗಳು, ಕವಿಗಳು, ಕವಯತ್ರಿಯರು, ವಿದ್ವಾಂಸರು, ವಿಮರ್ಶಕರು, ಪತ್ರಕರ್ತರು, ಉಪನ್ಯಾಸಕರು, ಶಿಕ್ಷಕ- ಶಿಕ್ಷಕಿಯರು ಹಾಗೂ ವಿದ್ಯಾರ್ಥಿಗಳು ದಿನಕ್ಕೊಬ್ಬರಂತೆ ವಾಚಿಸಲಿದ್ದಾರೆ.ಗ್ರಂಥ ಸರಸ್ವತಿ ಯೂಟ್ಯೂಬ್ ಚಾನೆಲ್ ಮೂಲಕ ನಿತ್ಯ ಸಂಜೆ 6.30 ಕ್ಕೆ ಈ ಕಾರ್ಯಕ್ರಮ ಬಿತ್ತರಗೊಳ್ಳಲಿದೆ ಎಂದು ಅವರು ತಿಳಿಸಿದ್ದಾರೆ.