ನವದೆಹಲಿ, ಜ. 4 – ಪ್ರಾಣಿಗಳ ಮೇಲಿನ ಕ್ರೌರ್ಯ ತಡೆಯುವ ಕಾಯ್ದೆಯ ಅನ್ವಯ ವ್ಯಾಪಾರಿಗಳು ಹಾಗೂ ಸಾಗಣೆದಾರರ ಪ್ರಾಣಿಗಳನ್ನು ವಶಪಡಿಸಿಕೊಳ್ಳುವ 2017ರ ಅಧಿಸೂಚನೆಯನ್ನು ವಾಪಸ್ ಪಡೆಯಬೇಕು ಇಲ್ಲವೇ ಬದಲಿಸಬೇಕು ಎಂದು ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ತಿಳಿಸಿದೆ.
ಮುಖ್ಯ ನ್ಯಾಯಮೂರ್ತಿ ಎಸ್.ಎ. ಬೊಬ್ಡೆ ಹಾಗೂ ನ್ಯಾಯಮೂರ್ತಿಗಳಾದ ಎ.ಎಸ್. ಬೋಪಣ್ಣ ಹಾಗೂ ವಿ. ರಾಮಸುಬ್ರಮಣ್ಯಂ ಅವರನ್ನು ಒಳಗೊಂಡ ಪೀಠ ಈ ಬಗ್ಗೆ ಆದೇಶ ಹೊರಡಿಸಿದ್ದು, ಪ್ರಾಣಿಗಳು ಈ ವ್ಯಕ್ತಿಗಳ ಜೀವನಾಧಾರವಾಗಿವೆ. ಹೀಗಾಗಿ ವಶಪಡಿಸಿಕೊಳ್ಳಬಾರದು ಎಂದು ತಿಳಿಸಿದೆ.
ವ್ಯಕ್ತಿಗೆ ಶಿಕ್ಷೆಯಾಗುವುದಕ್ಕೆ ಮುಂಚೆಯೇ ಪ್ರಾಣಿಗಳನ್ನು ವಶಪಡಿಸಿಕೊಳ್ಳುವುದು ವಿರೋಧಾಭಾಸವಾಗಿದೆ. ಆರೋಪ ಸಾಬೀತಾಗಿರುವವರ ವಿರುದ್ಧ ಮಾತ್ರ ಕ್ರಮ ತೆಗೆದುಕೊಳ್ಳಬಹುದು ನ್ಯಾಯಾಲಯ ಹೇಳಿದೆ.