ದಾವಣಗೆರೆ, ಜ.4- ನಗರದ ಮಹಾನಗರ ಪಾಲಿಕೆ ವ್ಯಾಪ್ತಿಯ ದಕ್ಷಿಣ ಸಂಚಾರ ಪೊಲೀಸ್ ಠಾಣೆ ಸರಹದ್ದಿನಲ್ಲಿರುವ ಜೆ.ಹೆಚ್. ಪಟೇಲ್ ರಸ್ತೆಯ ಜನಸಂದಣಿ ಹಾಗೂ ವಾಹನ ದಟ್ಟಣೆಗೆ ಬಹುತೇಕ ರಸ್ತೆ ಕಿರಿದಾಗಿದ್ದು ಎರಡೂ ಕಡೆ ವಾಹನ ನಿಲುಗಡೆ ಯಿಂದ ರಸ್ತೆಯ ಸುಗಮ ಸಂಚಾರಕ್ಕೆ ಹಾಗೂ ಪಾದಚಾರಿಗಳಿಗೆ ತೊಂದರೆ ಯಾಗುತ್ತಿರುವ ಹಿನ್ನೆಲೆಯಲ್ಲಿ ಈ ರಸ್ತೆಯನ್ನು ಏಕಮುಖ ವಾಹನ ನಿಲುಗಡೆ ರಸ್ತೆಯ ನ್ನಾಗಿ ಘೋಷಿಸಿ ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ.
ಜೆ.ಹೆಚ್ ಪಟೇಲ್ ರಸ್ತೆಯ ಎರಡೂ ಬದಿ ವಾಹನಗಳ ನಿಲುಗಡೆಯ ರಸ್ತೆಯಾಗಿರುತ್ತದೆ. ಈ ರಸ್ತೆಯ ಇಂದಿನ ಜನಸಂದಣಿ ಹಾಗೂ ವಾಹನ ದಟ್ಟಣೆಗೆ ಬಹುತೇಕ ರಸ್ತೆ ಕಿರಿದಾಗಿರುತ್ತದೆ. ಈ ರಸ್ತೆಯಲ್ಲಿ ಪ್ರತಿಷ್ಠಿತ ಜವಳಿ ವಾಣಿಜ್ಯ ಮಳಿಗೆಗಳು, ಪ್ರಮುಖ ವೈದ್ಯಕೀಯ ಹಾಗೂ ಇಂಜಿನಿಯರಿಂಗ್ ಹಾಗೂ ಇತರೆ ಶಾಲಾ-ಕಾಲೇಜು ಇತ್ಯಾದಿಗಳು ಇರುವುದರಿಂದ ಇಲ್ಲಿ ಎರಡೂ ಕಡೆ ವಾಹನ ನಿಲುಗಡೆ ಮಾಡುವುದರಿಂದ ವಾಹನಗಳ ಸುಗಮ ಸಂಚಾರಕ್ಕೆ ಅಡ್ಡಿಯಾಗುವುದರೊಂದಿಗೆ ಪಾದಚಾರಿಗಳು ರಸ್ತೆ ಮಧ್ಯೆ ಓಡಾಡುವುದರಿಂದ ಹಾಗೂ ರಸ್ತೆ ದಾಟುವುದರಿಂದ ಸಂಚಾರ ನಿರ್ವಹಣೆ ಕರ್ತವ್ಯ ಮಾಡುವುದು ದುಸ್ತರವಾಗಿದೆ.
ಈ ರಸ್ತೆಯು ಮೋದಿ ವೃತ್ತದ ಪ್ರಾರಂಭದಿಂದ ತರಳಬಾಳು ಶಾಲೆಯವರೆಗೆ ಇದ್ದು ಮೋದಿ ವೃತ್ತದಿಂದ ಹೋಗುವ ಮಾರ್ಗದ ‘ಎಡಭಾಗದ ಕಡೆಗೆ ಏಕಮುಖ ವಾಹನ ನಿಲುಗಡೆ ಹಾಗೂ ಬಲ ಭಾಗದ ಕಡೆ ವಾಹನ ನಿಲುಗಡೆ ನಿಷೇಧವನ್ನು ಮಾಡುವುದರಿಂದ ಜೆ.ಹೆಚ್. ಪಟೇಲ್ ರಸ್ತೆಯಲ್ಲಿ ಸುಗಮ ಸಂಚಾರಕ್ಕೆ ಅನುಕೂಲವಾಗಿರುತ್ತದೆ. ಈ ವಾಹನ ನಿಲುಗಡೆ ವ್ಯವಸ್ಥೆಯು ಜಿ.ಪಿ.ಎಸ್ ಜಾಗತಿಕ ಸ್ಥಾನೀಕರಣ ವ್ಯವಸ್ಥೆಯ ವಾಹನ ನಿಲುಗಡೆ (ಜಿಪಿಎಸ್-ಗ್ಲೋಬಲ್ ಪೊಸಿಷನಿಂಗ್ ಸಿಸ್ಟಂ ಇನ್ ವೆಹಿಕಲ್ ಪಾರ್ಕಿಂಗ್) ಈ ವ್ಯವಸ್ಥೆಯಿಂದ ಮಾಡಲಾಗುವುದು.
ಅದೇ ರೀತಿ ಈ ಪ್ರಮುಖ ರಸ್ತೆಗೆ ಹೊಂದಿಕೊಂಡಂತೆ ಬರುವ ಎಲ್ಲಾ ಕೂಡು ರಸ್ತೆಗಳಲ್ಲಿ ವಾಹನಗಳ ನಿಲುಗಡೆ ಬಳಕೆ ಮಾಡಿಕೊಳ್ಳುವುದರ ಜೊತೆಗೆ ಪಾದಚಾರಿಗಳ ಹಾಗೂ ವಾಹನ ಸವಾರರ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡುವ ಉದ್ದೇಶದಿಂದ ಮತ್ತು ನಾಗರಿಕರ ಹಿತದೃಷ್ಟಿಯಿಂದ ‘ಎಡಭಾಗದ ಕಡೆಗೆ ಏಕಮುಖ ವಾಹನ ನಿಲುಗಡೆ ಹಾಗೂ ಬಲ ಭಾಗದ ಕಡೆ ವಾಹನ ನಿಲುಗಡೆ ನಿಷೇಧಿಸಿ ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ.