ದಾವಣಗೆರೆ,ಜ.2- ಮರಾಠ ಅಭಿವೃದ್ಧಿ ನಿಗಮವನ್ನು ಸ್ಥಾಪಿಸಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಕ್ರಮವನ್ನು ಭಾವಸಾರ ಕ್ಷತ್ರಿಯ ಸಮಾಜದ ರಾಷ್ಟ್ರೀಯ ಅಧ್ಯಕ್ಷರೂ ಆಗಿರುವ ಕೈಗಾರಿಕೋದ್ಯಮಿ ಜಯಪ್ರಕಾಶ್ ಯು. ಅಂಬರ್ ಕರ್ ಸ್ವಾಗತಿಸಿದ್ದಾರೆ.
ಭಾವಸಾರ ಕ್ಷತ್ರಿಯ ಸಮಾಜ ಬಾಂಧವರ ಕುಲಕಸಬು ಬಟ್ಟೆ ಹೊಲಿಯುವ ವೃತ್ತಿಯಾಗಿದ್ದು, ಷಹಾಜಿರಾಂ ಬೋಸ್ಲೆ ಅವರ ಸೈನ್ಯದ ಜೊತೆಗೆ ಭಾವಸಾರ ಕ್ಷತ್ರಿಯ ಸಮಾಜದವರು ಮಹಾರಾಷ್ಟ್ರದಿಂದ ಟೈಲರಿಂಗ್ ವೃತ್ತಿ ಮಾಡುತ್ತಾ ಕರ್ನಾಟಕದ ಬಿಜಾಪುರಕ್ಕೆ ಬಂದರು. ಅಲ್ಲಿಂದ ಸೈನ್ಯ ಹೋದೆಡೆಯಲ್ಲೆಲ್ಲಾ ಅಲ್ಲೇ ನೆಲೆಸುತ್ತಾ ಬಂದಿದ್ದಾರೆ. ಇದೀಗ ಈ ಸಮಾಜದವರ ಜನಸಂಖ್ಯೆ ಕರ್ನಾಟಕದಲ್ಲಿ 20 ಲಕ್ಷ ಇದ್ದು, ಅವರೆಲ್ಲಾ ಮರಾಠಿ ಭಾಷೆ ಮಾತನಾಡುತ್ತರಾದರೂ ಕನ್ನಡಾಭಿಮಾನವನ್ನು ಹೊಂದಿದ್ದಾರೆ. ಓದು- ಬರಹ ಮಾತ್ರವಲ್ಲದೇ, ಎಲ್ಲಾ ವ್ಯವಹಾರವನ್ನು ಕನ್ನಡದಲ್ಲೇ ಮಾಡುತ್ತಾ, ಕರ್ನಾಟಕದ ಜನರೊಂದಿಗೆ ಅನ್ಯೋನ್ಯವಾಗಿದ್ದಾರೆ ಎಂದವರು ಹೇಳಿದ್ದಾರೆ.
ಭಾವಸಾರ ಸಮಾಜದವರು ಆರ್ಥಿಕ ಮತ್ತು ಶೈಕ್ಷಣಿಕವಾಗಿ ತೀರಾ ಹಿಂದುಳಿದಿದ್ದು, ಸರ್ಕಾರ ಮರಾಠ ನಿಗಮ ಸ್ಥಾಪನೆ ಮಾಡಿರುವುದರಿಂದ ಈ ಸಮಾಜದವರ ಶೈಕ್ಷಣಿಕ ಮತ್ತು ಆರ್ಥಿಕ ಸುಧಾರಣೆ ಸಾಧ್ಯವಾಗಲಿದೆ ಎಂದು ಜಯಪ್ರಕಾಶ್ ಅಂಬರ್ ಕರ್ ಅಭಿಪ್ರಾಯಪಟ್ಟಿದ್ದಾರೆ.
ಮರಾಠ ನಿಗಮ ಸ್ಥಾಪಿಸುವುದರ ಮೂಲಕ ಭಾವಸಾರ ಕ್ಷತ್ರಿಯ ಜನಾಂಗಕ್ಕೂ ಸಹಾಯ ಮಾಡಿರುವ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಅಂಬರ್ ಕರ್ ಕೃತಜ್ಞತೆ ಸಲ್ಲಿಸಿದ್ದಾರೆ.