ದಾವಣಗೆರೆ, ಜ.2- ಅಯೋಧ್ಯೆಯಲ್ಲಿ ನಿರ್ಮಿಸಲಾಗುತ್ತಿರುವ ಶ್ರೀ ರಾಮ ಮಂದಿರ ನಿರ್ಮಾಣಕ್ಕೆ ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಯೋಜನೆಯನ್ವಯ ನಿಧಿ ಸಂಗ್ರಹ ಅಭಿಯಾನವು ಇದೇ ಜನವರಿ 15 ರಿಂದ ಫೆಬ್ರವರಿ 6ರವರೆಗೆ ಜಿಲ್ಲಾದ್ಯಂತ ನಡೆಯಲಿದೆ ಎಂದು ಅಭಿಯಾನದ ಜಿಲ್ಲಾ ಪ್ರಮುಖ ಕೆ.ಎಸ್. ರಮೇಶ್ ಹೇಳಿದರು.
ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, ಜಿಲ್ಲೆಯ 843 ಹಳ್ಳಿಗಳ ಸುಮಾರು 90 ಲಕ್ಷ ರಾಮಭಕ್ತರನ್ನು ತಲುಪಿ ರಾಮ ಮಂದಿರ ನಿರ್ಮಾಣಕ್ಕೆ ಧನ ಸಂಗ್ರಹಿಸುವ ಯೋಜನೆಯನ್ನು ವಿಶ್ವ ಹಿಂದೂ ಪರಿಷದ್ ಹಾಕಿಕೊಂಡಿದೆ ಎಂದರು.
ಈಗಾಗಲೇ ಜಿಲ್ಲೆಯಲ್ಲಿ 5750ಕ್ಕೂ ಹೆಚ್ಚು ಕಾರ್ಯಕರ್ತರು ಅಭಿಯಾನ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಪ್ರತಿ ತಾಲ್ಲೂಕು, ಹೋಬಳಿ ಮಟ್ಟದಲ್ಲಿ ಕಾರ್ಯಕರ್ತರ ಸಮಾವೇ ಶಗಳಿವೆ. ಇದೀಗ ಗ್ರಾಮ ಮಟ್ಟದಲ್ಲಿ ನಾಲ್ಕು ಜನರ ಸಮಿತಿ ರಚಿಸಿ, ಗ್ರಾಮದ ಪ್ರತಿ ಮನೆಗೂ ತೆರಳಿ ಧನ ಸಂಗ್ರಹ ನಡೆಸಲಾಗುವುದು.
10 ರೂ., 100 ರೂ., 1000 ರೂ.ಗಳ ಮುದ್ರಿತ ಕೂಪನ್ ಸಹಾಯದಿಂದ ಧನ ಸಂಗ್ರಹ ನಡೆಯಲಿದೆ. 2 ಸಾವಿರ ರೂ. ಹಾಗೂ ಅದಕ್ಕಿಂತ ಹೆಚ್ಚಿನ ಮೊತ್ತ ನೀಡಿದ ಭಕ್ತರಿಗೆ ರಶೀದಿ ನೀಡಲಾಗುವುದು. ರಶೀದಿ ಪಡೆದ ಭಕ್ತರು ಆದಾಯ ತೆರಿಗೆ ಕಾಯ್ದೆಯ 80ಜಿ ಸೆಕ್ಷನ್ ಅಡಿಯಲ್ಲಿ ತೆರಿಗೆ ವಿನಾಯಿತಿ ಸೌಲಭ್ಯ ಪಡೆಯಬಹುದಾಗಿದೆ. 20 ಸಾವಿರ ರೂ. ಮೇಲೆ ಹಣ ನೀಡುವವರು ಕಡ್ಡಾಯವಾಗಿ ಚೆಕ್ ಮೂಲಕ ನೀಡಬೇಕಿದೆ ಎಂದು ಮಾಹಿತಿ ನೀಡಿದರು. ಸಂಗ್ರವಾದ ಮೊತ್ತವನ್ನು 48 ಗಂಟೆಯೊಳಗಾಗಿ ತೀರ್ಥಕ್ಷೇತ್ರ ಟ್ರಸ್ಟ್ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ. ಹಣ ಸಂಗ್ರಹಣೆ, ಹಾಗೂ ಪಾವತಿ ವ್ಯವಸ್ಥೆ ಸಂಪೂರ್ಣ ಪಾರದರ್ಶಕವಾಗಿರುತ್ತದೆ ಎಂದು ಹೇಳಿದರು.
ಇದೇ 3ನೇ ತಾರೀಖು ನಗರ ಹಾಗೂ ಗ್ರಾಮಗಳಲ್ಲಿ ರಾಮ ಮಂದಿರ ಅಭಿಯಾನದ ಮಹಾ ಸಾಂಘಿಕ್ ನಡೆಯಲಿದೆ.
6 ರಂದು ವಿದ್ಯಾರ್ಥಿಗಳ ಮ್ಯಾರಥಾನ್ ಓಟ, 10 ರಂದು ಪ್ರತಿ ವಸತಿ, ವಾರ್ಡ್‌ಗಳಲ್ಲಿ ಸಂಘಿಕ್ ಹಾಗೂ 11 ರಂದು ಬೈಕ್ ರಾಲಿ ನಡೆಯಲಿದೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಸಹ ಪ್ರಮುಖ್ ಬಿ.ಕೆ. ತಿಪ್ಪೇಸ್ವಾಮಿ, ಸಂಘ ಚಾಲಕ ರಾದ ಜಿ.ಎಸ್. ಉಮಾಪತಿ, ಭಜರಂಗ ದಳದ ಪ್ರಮುಖ್ ಸಿ.ಎಸ್. ರಾಜು ಉಪಸ್ಥಿತರಿದ್ದರು.