ಈ ಕೆರೆಯನ್ನು 2001-02ರಲ್ಲಿ ಕೇವಲ 2 ಕೋಟಿ ರೂ.ಗಳ ವೆಚ್ಚದಲ್ಲಿ ಸಮರ್ಥ ವಾಗಿ ಅಭಿವೃದ್ಧಿಪಡಿಸುವುದರ ಮೂಲಕ ನಗರದ ಸಾರ್ವಜನಿಕರಿಗೆ ಕುಡಿಯುವ ನೀರು ಒದಗಿಸುವಂತೆ ಮಾಡಲಾಗಿತ್ತು. ಆದರೆ, ಈಗ 15 ಕೋಟಿ ರೂ.ಗಳ ಬೃಹತ್ ಕಾಮಗಾರಿ ಕೈಗೆತ್ತಿಕೊಂಡಿರುವುದರಲ್ಲಿ ಅಂತ ವಿಶೇಷ ಏನಿದೆ ? ಎಂದು ಅವರು ಪ್ರಶ್ನಿಸಿದ್ದಾರೆ.
ಮಾಜಿ ಸಚಿವ ಶಾಮನೂರು ಮಲ್ಲಿಕಾರ್ಜುನ್ ಅವರ ದೂರದೃಷ್ಟಿಯಿಂದಾಗಿ ಅಭಿವೃದ್ಧಿ ಹೊಂದಿದ ಈ ಕೆರೆ ಜನರ ಜೀನನಾಡಿಯಾಗಿ ಉಳಿದಿದೆ ಎಂದರೆ ಅದರ ಹಿಂದೆ ರೂಪಿಸಲಾಗಿದ್ದ ಸಮರ್ಥ ಯೋಜನೆಯೇ ಕಾರಣ ಎಂದು ರಮೇಶ್ ಪ್ರತಿಪಾದಿಸಿದ್ದಾರೆ.
15 ಕೋಟಿ ರೂ.ಗಳ ವೆಚ್ಚದಲ್ಲಿ ಕೆರೆಯಲ್ಲಿ ಬೆಳೆದಿರುವ ಕಳೆ, ಹೂಳು ತೆಗೆಯುವುದು, ಏರಿಯನ್ನು ಅಭಿವೃದ್ಧಿಪಡಿಸುವುದು, ಪೊದೆ- ಮುಳ್ಳನ್ನು ತೆರವುಗೊಳಿಸುವುದು, ಕೆರೆಯ ಒಳ ಮುಖದ ಇಳಿಜಾರಿನ ರಕ್ಷಣಾ ಕಾರ್ಯ ಕೈಗೊಳ್ಳುವುದಷ್ಟನ್ನೇ ಹೊರತುಪಡಿಸಿ ವಿಶೇಷವಾಗಿ ಯಾವ ರೀತಿ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗಿದೆ ಎಂದು ಅವರು ಕೇಳಿದ್ದಾರೆ.
ಈ ಕೆರೆಗೆ ದೇಶ-ವಿದೇಶಗಳಿಂದ ಹೆಸರಾಂತ ನಾನಾ ತರಹದ ಪಕ್ಷಿಗಳು ಬರುತ್ತಿವೆ. ಅವುಗಳಿಗೆ ಗೂಡು ಕಟ್ಟುವಂತಹ ಕೆಲಸವೇನಾದರೂ ಆಗುತ್ತದೆಯೇ ?, ಕೆರೆಯ ಸೌಂದರ್ಯೀಕರಣಕ್ಕೆ ಯಾವ ರೀತಿ ಒತ್ತು ನೀಡಲಾಗಿದೆ ?, ವಾಯು ವಿಹಾರಿಗಳು ಮತ್ತು ಜನರನ್ನು ಆಕರ್ಷಿಸುವಂತಹ ಯಾವ ಯೋಜನೆ ಕೈಗೊಂಡಿದ್ದೀರಿ ಎಂಬಿತ್ಯಾದಿ ಪ್ರಶ್ನೆಗಳನ್ನು ಶಿವನಳ್ಳಿ ಅಧಿಕಾರಿಗಳ ಮುಂದಿಟ್ಟಿದ್ದಾರೆ.
ಈ ಹಿನ್ನೆಲೆಯಲ್ಲಿ ಸಂಬಂಧಪಟ್ಟ ವಿಷಯ ತಜ್ಞರು, ಪರಿಣಿತರಿಂದ ಅಭಿಪ್ರಾಯಗಳನ್ನು ಕೇಳಿ ವರದಿ ತಯಾರಿಸಬಹುದಿತ್ತು. ಸಾರ್ವಜನಿಕರ ಸಭೆೆ ನಡೆಸಿ ಸಲಹೆ – ಸೂಚನೆ, ಅಭಿಪ್ರಾಯಗಳನ್ನು ಸಂಗ್ರಹಿಸಬಹುದಿತ್ತು. ನಂತರ ಒಂದು ಸಮರ್ಥವಾದ ಯೋಜನೆ ರೂಪಿಸಿದ್ದರೆ, ಕಾಮಗಾರಿಗೆ ಹಾಕುತ್ತಿರುವ 15 ಕೋಟಿ ರೂ.ಗಳಿಗೆ ಸಾರ್ಥಕ ತಂದುಕೊಡುತ್ತಿತ್ತು ಎಂದು ಅವರು ಹೇಳಿದ್ದಾರೆ.
ಪ್ರಸಕ್ತ ಪರಿಸ್ಥಿತಿಯಲ್ಲಿ ಅಭಿವೃದ್ಧಿ ಕೈಗೊಳ್ಳಲು ಬೇಕಾಗುವ ಹಣ ಸಿಗುವುದೇ ನಮ್ಮ ಪುಣ್ಯ. ದೊರೆತಿರುವ ಅನುದಾನವನ್ನು ಸಮರ್ಥವಾಗಿ ಬಳಸಿಕೊಳ್ಳುವ ದಿಸೆಯಲ್ಲಿ ಶಾಶ್ವತ ಅಭಿವೃದ್ಧಿ ಕಾಮಗಾರಿ ನಡೆಸಿದ್ದಲ್ಲಿ ನಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗುವುದಲ್ಲದೇ, ಸಾರ್ವಜನಿಕರಿಂದ ಮೆಚ್ಚುಗೆ ಗಳಿಸಲು ಸಾಧ್ಯ ಎಂದು ಅವರು ಕಳಕಳಿ ವ್ಯಕ್ತಪಡಿಸಿದ್ದಾರೆ.
ನಾಡಿಗೆ ಹೆಸರು ತಂದುಕೊಡುವ ನಿಟ್ಟಿನಲ್ಲಿ ನಗರದಲ್ಲಿ ನಿರ್ಮಾಣಗೊಂಡಿರುವ ಗ್ಲಾಸ್ ಹೌಸ್ ಆಕರ್ಷಣೀಯ ಕೇಂದ್ರವಾಗಿ ಜನರನ್ನು ಕೈಬೀಸಿ ಕರೆಯುತ್ತಿದೆ. ಗ್ಲಾಸ್ ಹೌಸ್ ವಿನ್ಯಾಸಕ್ಕೆ ರಾಷ್ಟ್ರ ಪ್ರಶಸ್ತಿ ದೊರೆತಿದೆ ಎಂದರೆ ಅದರ ಹಿಂದೆ ಹಿರಿಯ ಶಾಸಕ ಡಾ. ಶಾಮನೂರು ಶಿವಶಂಕರಪ್ಪ ಮತ್ತು ಮಾಜಿ ಸಚಿವ ಶಾಮನೂರು ಮಲ್ಲಿಕಾರ್ಜುನ್ ಅವರ ದೂರದೃಷ್ಟಿಯೇ ಕಾರಣ ಎಂದು ಶಿವನಳ್ಳಿ ಹೇಳಿದ್ದಾರೆ.