ಬ್ಯಾಂಕ್ ಖಾತೆಗೆ ಪಾನ್ ಕಾರ್ಡ್ ಅಪ್ಡೇಟ್ ನೆಪ

ದಾವಣಗೆರೆ, ಮಾ.2- ಬ್ಯಾಂಕ್ ಖಾತೆಗೆ ಪಾನ್ ಕಾರ್ಡ್ ಅಪ್ ಡೇಟ್ ಮಾಡುವಂತೆ ಲಿಂಕ್ ಮೆಸೇಜ್ ಕಳುಹಿಸಿದ್ದನ್ನೇ ನಂಬಿದ ಇಂಜಿನಿಯರ್ ಅವರ ಬ್ಯಾಂಕ್ ಖಾತೆಯಲ್ಲಿದ್ದ 6 ಲಕ್ಷಕ್ಕೂ ಅಧಿಕ ಹಣವನ್ನು ಅಪರಿಚಿತರು ಆನ್ ಲೈನ್ ಮುಖೇನ ದೋಚಿ ವಂಚಿಸಿರುವ ಬಗ್ಗೆ ಇಲ್ಲಿನ ಸಿಇಎನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಗರದ ಜಯನಗರ ಬಿ ಬ್ಲಾಕ್ ನ ಸಿ. ರವಿಕುಮಾರ್ ವಂಚನೆಗೊಳಗಾದ ಇಂಜಿನಿಯರ್.

ನಿನ್ನೆ ತಮ್ಮ ಮೊಬೈಲ್‌ಗೆ ಅಪರಿಚಿತ ಮೊಬೈಲ್ ಸಂಖ್ಯೆಯಿಂದ ಬಂದ ಲಿಂಕ್ ನಲ್ಲಿದ್ದ ಸಂದೇಶದಂತೆ ತಮ್ಮ ಬ್ಯಾಂಕ್ ಖಾತೆಯ ಪೂರ್ಣ ಮಾಹಿತಿ ಮತ್ತು 6 ಬಾರಿ ಬಂದ ಒಟಿಪಿ ನಂಬರ್ ಗಳನ್ನು ನಮೂದಿಸಿದ್ದಾರೆ. ಇದಾದ ಕೆಲವೇ ಕ್ಷಣದಲ್ಲಿ ಖಾತೆಯಿಂದ 6 ಲಕ್ಷದ 27 ಸಾವಿರದ 797 ರೂ. ಹಣ ಕಡಿತ ವಾಗಿದೆ. ಇದೇ ವೇಳೆ ರವಿಕುಮಾರ್ ಅವರನ್ನು ದೂರವಾಣಿ ಮುಖಾಂತರ ಸಂಪರ್ಕಿಸಿದ ಅಪರಿಚಿತನು ತಾನು ಎಸ್‌ಬಿಐ ಬ್ಯಾಂಕ್ ರಿಕವರಿ ಶಾಖೆ ಮುಂಬೈನಿಂದ ಮಾತನಾಡುತ್ತಿರು ವುದಾಗಿ ತಿಳಿಸಿ, ನಿಮ್ಮ ಖಾತೆಯಿಂದ ಕಡಿತವಾಗಿರುವ ಹಣವನ್ನು ರಿಕವರಿ ಮಾಡಿ ಕೊಡುತ್ತೇವೆ ಎಂದು ನಂಬಿಸಿದ್ದಾನೆ. ಈ ಬಗ್ಗೆ ಎಚ್ಚೆತ್ತ ಇಂಜಿನಿಯರ್, ಅಪರಿಚಿತರು ಬ್ಯಾಂಕ್ ಖಾತೆಗೆ ಪಾನ್ ಕಾರ್ಡ್ ಅಪ್ ಡೇಟ್ ಮಾಡು ವಂತೆ ಲಿಂಕ್ ಮೆಸೇಜ್ ಕಳುಹಿಸಿ ಮತ್ತು ಎಸ್.ಬಿ.ಐ ಬ್ಯಾಂಕ್ ರಿಕವರಿ ಅಧಿಕಾರಿ ಸೋಗಿನಲ್ಲಿ ವಂಚಿಸುತ್ತಿರುವ ಬಗ್ಗೆ ಅನುಮಾನಗೊಂಡು ಪುನಃ ಅಪರಿಚಿತರ ಮಾತು ಕೇಳದೆ ಇದ್ದ ಕಾರಣ ಮತ್ತಷ್ಟು ಹಣ ಕಳೆದುಕೊಳ್ಳುವುದು ತಪ್ಪಿದೆ.

error: Content is protected !!