ಹರಪನಹಳ್ಳಿ, ಫೆ.11- ಉತ್ತರ ಕರ್ನಾಟಕ ಹಾಗೂ ಮಧ್ಯ ಕರ್ನಾಟಕದ ಆರೆಂಟು ಜಿಲ್ಲೆ ಸೇರಿದಂತೆ ನೆರೆ ರಾಜ್ಯಗಳ ಲಕ್ಷಾಂತರ ಭಕ್ತರ ಆರಾಧ್ಯ ದೈವ, ಉಚ್ಚಂಗಿದುರ್ಗದ ಉಚ್ಚಂಗೆಮ್ಮದೇವಿ ಜಾತ್ರೋತ್ಸವ ಇದೇ ದಿನಾಂಕ 16 ರಂದು ಭರತ ಹುಣ್ಣಿಮೆಯ ಸಂದರ್ಭದಲ್ಲಿ ಅದ್ಧೂರಿಯಾಗಿ ನಡೆಯುತ್ತಿದ್ದು, ಈ ಬಾರಿ ಕೋವಿಡ್- 19 ಸಾಂಕ್ರಾಮಿಕ ವೈರಸ್ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಉತ್ಸವಕ್ಕೆ ನಿರ್ಬಂಧ ವಿಧಿಸಿರುವ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅರುಣ್ ಉಚ್ಚಂಗಿದುರ್ಗಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು.
ಗ್ರಾಮ ದೇವತೆ ಜಾತ್ರೆಯ ಹಿನ್ನೆಲೆಯಲ್ಲಿ ಸಾರ್ವಜ ನಿಕರ ಪ್ರವೇಶ ನಿಷೇಧ ಸೇರಿದಂತೆ, ವಿವಿಧ ರೀತಿಯ ಮುಂಜಾಗ್ರತಾ ಕ್ರಮಗಳ ಪರಿಶೀಲನೆ ನಡೆಸಿದರು.
ಜಾತ್ರೆಯಲ್ಲಿ ನೆರೆಯ ಮಹಾರಾಷ್ಟ್ರ ಹಾಗೂ ಆಂಧ್ರಪ್ರದೇಶದ ಭಕ್ತರೂ ಪಾಲ್ಗೊಳ್ಳುತ್ತಿದ್ದಾರೆ. ಹೀಗಾಗಿ, ಜಾತ್ರೆಯಲ್ಲಿ ಭಕ್ತರ ಪ್ರವೇಶಕ್ಕೆ ಸಂಪೂರ್ಣ ನಿರ್ಬಂಧ ವಿಧಿಸಿದೆ. ಸಾರಿಗೆ ಸಂಸ್ಥೆಯ ಬಸ್ ಕಾರ್ಯಾಚರಣೆ ಸೇರಿದಂತೆ ಖಾಸಗಿ ವಾಹನಗಳ ಪ್ರವೇಶವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಭಕ್ತರು, ಸರ್ಕಾರದ ಜತೆ ಕೈಜೋಡಿಸುವಂತೆ ಸಲಹೆ ನೀಡಿದರು.
ಜಾತ್ರೆಗೂ ಮುನ್ನವೇ ಗ್ರಾಮದಲ್ಲಿ ಹಾದು ಹೋಗಿರುವ ಮಂಡ್ಯ- ಹೂವಿನಹಡಗಲಿ ರಾಜ್ಯ ಹೆದ್ದಾರಿ ಸೇರಿದಂತೆ ಗ್ರಾಮಕ್ಕೆ ಸಂಪರ್ಕ ಬೆಸೆಯುವ ಎಲ್ಲಾ ರಸ್ತೆಗಳಿಗೂ ಊರ ಹೊರಗೆ ಬ್ಯಾರಿಕೇಡ್ ಹಾಕಿ, ಸಾರ್ವಜನಿಕರ ಪ್ರವೇಶ ನಿಷೇಧಿಸಲು ಎಲ್ಲಾ ರೀತಿಯ ತಯಾರಿ ಮಾಡಿಕೊಳ್ಳುವಂತೆ ಪೊಲೀಸ್ ಇಲಾಖೆಯ ಡಿವೈಎಸ್‍ಪಿ ಹಾಗೂ ಸಿಪಿಐಗೆ ಪೊಲೀಸ್ ವರಿಷ್ಠಾಧಿಕಾರಿ ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.
ಜಾತ್ರೆಯ ಸಂದರ್ಭದಲ್ಲಿ ನಡೆಯುತ್ತಿದೆ ಎನ್ನಲಾದ ಸಾಮಾಜಿಕ ಅನಿಷ್ಟ ಪಿಡುಗುಗಳ ಆಚರಣೆಯ ಮೇಲೂ ತೀವ್ರ ಕಟ್ಟೆಚ್ಚರ ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ ಡಾ. ಅರುಣ್ ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.
ಜಗಳೂರು ಮತ ಕ್ಷೇತ್ರ ವ್ಯಾಪ್ತಿಯ ಐತಿಹಾಸಿಕ ಗ್ರಾಮಕ್ಕೆ ಪ್ರಥಮ ಬಾರಿಗೆ ಭೇಟಿ ನೀಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅರುಣ್ ಕೆ. ಅವರನ್ನು, ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ನಿಗಮದ ಅಧ್ಯಕ್ಷರೂ ಆದ ಶಾಸಕ ಎಸ್.ವಿ. ರಾಮಚಂದ್ರ ಗ್ರಾಮಸ್ಥರ ಪರವಾಗಿ ಸತ್ಕರಿಸಿದರು.
ಈ ಸಂದರ್ಭದಲ್ಲಿ ಡಿವೈಎಸ್‍ಪಿ ಹಾಲಮೂರ್ತಿರಾವ್, ಸಿಪಿಐ ನಾಗರಾಜ ಕಮ್ಮಾರ್, ಅರಸೀಕೆರೆ ಠಾಣೆ ಪಿಎಸ್‍ಐ ನಾಗರತ್ನ, ಮುಖಂಡರಾದ ಎಂ.ಜಿ. ಸಿದ್ದನಗೌಡ, ಫಣಿಯಾಪುರ ಲಿಂಗರಾಜ್ ಸೇರಿದಂತೆ ಇತರರು ಇದ್ದರು.