ವಿದ್ಯಾರ್ಥಿಗಳಿಗೆ ಕರೆ
ಹಿಂದೆ ನಾವೆಲ್ಲರೂ ಒಂದೇ ಊಟದ ಡಬ್ಬಿಯಲ್ಲಿ ಊಟ ತಿಂದವರು, ಅಲ್ಲದೆ ಸರಸ್ವತಿ ಪೂಜೆಯಲ್ಲಿ ಪಾಲ್ಗೊಂಡಿದ್ದೇವೆ. ಅಲ್ಲದೇ ಗಣಪತಿ ಪೂಜೆಯನ್ನೂ ಮಾಡಿದ್ದೇವೆ. ಆದರೆ ಈಗೀಗ ವಿನಾಕಾರಣ ಸಮಸ್ಯೆಯನ್ನು ಸೃಷ್ಟಿಸಲಾಗುತ್ತಿದೆ. ಆಗ ನಮಗ್ಯಾರಿಗೂ ಜಾತಿ ಮುಖ್ಯವಾಗಿರಲಿಲ್ಲ. ವಿದ್ಯೆ ಮುಖ್ಯ ಆಗಿತ್ತು ಇದೀಗ ವಿದ್ಯಾರ್ಥಿಗಳ ಮನಸ್ಸಿನಲ್ಲಿ ಕೋಮು ವಿಷ ಬೀಜ ಬಿತ್ತುವ ಕೆಲ ಸಂಘಟನೆಗಳನ್ನು ಸೋಲಿಸಬೇಕಾಗಿದೆ.
-ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ
ದಾವಣಗೆರೆ, ಫೆ.11- ರಾಜ್ಯದಲ್ಲಿ ನಡೆಯುತ್ತಿರುವ ಹಿಜಾಬ್ ಹಾಗೂ ಕೇಸರಿ ಶಾಲು ಗಲಭೆಯನ್ನು ಗಮನಿಸಿದರೆ ಇದರಲ್ಲಿ ರಾಜ್ಯ ಸರ್ಕಾರ, ಪೊಲೀಸ್ ಇಲಾಖೆ ಗುಪ್ತವಾರ್ತೆ ಸಂಪೂರ್ಣ ವಿಫಲವಾದಂತೆ ಕಾಣುತ್ತಿದೆ ಎಂದು ಎಸ್ ಡಿಪಿಐ ರಾಜ್ಯ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಅಪ್ಸರ್ ಕೊಡ್ಲಿಪೇಟೆ ತಿಳಿಸಿದರು.
ಇಂದಿಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮಗೆ ಹಿಜಾಬ್ ಯಾವತ್ತೂ ಸಮಸ್ಯೆಯಾಗಿರಲಿಲ್ಲ. ಆದರೆ ರಾಜ್ಯದಲ್ಲಿ ಕೇಸರಿ ಶಾಲು ರಾಜ್ಯಾದ್ಯಂತ ಗಲಭೆ ಸೃಷ್ಟಿಸಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ವಿನಾಕಾರಣ ಈ ಸಮಸ್ಯೆಯನ್ನು ಉತ್ತುಂಗಕ್ಕೆ ಕೊಂಡೊಯ್ಯಲಾಗುತ್ತಿದೆ. ಕುವೆಂಪುರವರ ಜನಿಸಿದ ಕರ್ನಾಟಕ ರಾಜ್ಯ ಎಲ್ಲ ಧರ್ಮದವರ ನೆಲೆವೀಡಾಗಿದೆ ಇಲ್ಲಿ ನಾವೆಲ್ಲರೂ ಶಾಂತಿ, ಸೌಹಾರ್ದತೆಯಿಂದ ಬಾಳಬೇಕಾಗಿದೆ. ಆದರೆ ರಾಜ್ಯದ ಪ್ರಾಯೋಜಿತ ಕುತಂತ್ರವೂ ಇಲ್ಲಿ ಕೆಲಸ ಮಾಡುತ್ತಿದೆ. ರಾಜ್ಯದ ವಿದ್ಯಾರ್ಥಿಗಳು ನಾವೆಲ್ಲರೂ ಸಹೋದರ-ಸಹೋದರಿಯರಂತೆ ತಿಳಿದು ಬಾಳಬೇಕು. ಈ ನಿಟ್ಟಿನಲ್ಲಿ ಎಲ್ಲರೂ ಮುಂದಾಗಬೇಕಿದೆ ಎಂದು ಕಿವಿಮಾತು ಹೇಳಿದರು.
ರಾಜ್ಯದ ಜನರಿಗೆ ದೊರೆಯಬೇಕಾದ ಶಿಕ್ಷಣ, ಆರೋಗ್ಯ, ಮೂಲಭೂತ ಸೌಲಭ್ಯಗಳು ಸೇರಿದಂತೆ ಇತರೆ ವಿಚಾರಗಳಲ್ಲಿ ನಾವು ರಾಜಕೀಯ ಮಾಡುತ್ತೇವೆಯೇ ವಿನಃ ಶಾಲಾ-ಕಾಲೇಜುಗಳನ್ನು ಬಳಸಿಕೊಂಡು ನಾವು ರಾಜಕೀಯ ಮಾಡುವುದಿಲ್ಲ ಎಂದು ಸ್ಪಷ್ಟನೆ ನೀಡಿದರು.