ನ್ಯಾಯಾಲಯದ ಆದೇಶವಿದ್ದರೂ ಸಿಗದ ವೇತನ, ಪಿಂಚಣಿ ಸೌಲಭ್ಯ

ದಾವಣಗೆರೆ, ಜ.18- ಕರ್ನಾಟಕ ರಾಜ್ಯ ಉಚ್ಛ ನ್ಯಾಯಾಲಯದ ಆದೇಶವಿದ್ದರೂ ಶಾಲಾ ಆಡಳಿತ ಮಂಡಳಿ ವೇತನ ಮತ್ತು ಪಿಂಚಣಿಯನ್ನು ನೀಡುತ್ತಿಲ್ಲ ಎಂದು ನಿವೃತ್ತ ಶಿಕ್ಷಕಿ ಕೆ.ಡಿ. ಪದ್ಮಾವತಿ ಅವರು ಸುದ್ದಿಗೋಷ್ಠಿಯಲ್ಲಿ ತಮ್ಮ ಅಳಲು ತೋಡಿಕೊಂಡರು.

1984-85 ರಲ್ಲಿ ದಾವಣಗೆರೆ ತಾಲ್ಲೂಕಿನ ರಾಂಪುರ ಮತ್ತು ಕಾಡಜ್ಜಿ ಗ್ರಾಮದ ಆರ್.ಜಿ. ನಂಜಪ್ಪ ಪ್ರೌಢಶಾಲೆಯಲ್ಲಿ ಹಿಂದಿ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸಿದ್ದು, ಆಡಳಿತ ಮಂಡಳಿಯವರು ಯಾವುದೇ ಮುನ್ಸೂಚನೆ ನೀಡದೇ ಕೆಲಸದಿಂದ ತೆಗೆದು ಹಾಕಿದ್ದರು. ಇದನ್ನು ಪ್ರಶ್ನಿಸಿ ಹೈಕೋರ್ಟ್‌ ನಲ್ಲಿ ರಿಟ್‌ ಅರ್ಜಿ ಸಲ್ಲಿಸಿದ್ದರಿಂದ ನನಗೆ ದಿನಾಂಕ 16.9.1993 ರಲ್ಲಿ  ನನ್ನನ್ನು ಕೆಲಸಕ್ಕೆ ತೆಗೆದು ಕೊಂಡರು. ಪೂರ್ಣ ಸಂಬಳ ಕೊಡಬೇಕೆಂಬ ಆದೇಶವಿದ್ದರೂ, ಆಡಳಿತ ಮಂಡಳಿಯವರು ನಿರ್ಲಕ್ಷ್ಯ ವಹಿಸಿದರು ಎಂದರು. ಮತ್ತೆ 2014 ರಲ್ಲಿ ಹೈಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಸಿದ್ದು, ವಯೋ ನಿವೃತ್ತಿ ಕಾರಣ ವೇತನ ಮತ್ತು ಪಿಂಚಣಿ ನೀಡು ವಂತೆ ಕೂಡ ಆದೇಶವಾಗಿತ್ತು. ಆದರೆ ಶಿಕ್ಷಣ ಇಲಾಖೆ ಸಿಬ್ಬಂದಿ ಇದಕ್ಕೆ ಸಹಕರಿಸಲಿಲ್ಲ. ಇಲಾಖೆ ಆದೇಶವನ್ನು ಆಡಳಿತ ಮಂಡಳಿ ಪಾಲಿಸಲಿಲ್ಲ ಎಂದು ದೂರಿದರು. ನನ್ನ ವಿರುದ್ಧ ಆಡಳಿತ ಮಂಡ ಳಿಯವರು ಹೂಡಿದ್ದ ದಾವೆ  ವಜಾಗೊಂಡಿದೆ. ಸರ್ಕಾರದ ಕಾರ್ಯದರ್ಶಿಯವರು ಸರ್ಕಾರದಿಂದ ಸಿಗಬಹುದಾದ ಸೌಲಭ್ಯಗಳನ್ನು ನೀಡುವಂತೆ ಆದೇಶಿಸಿದ್ದಾರೆ ಎಂದು ಮಾಹಿತಿ ನೀಡಿದರು. ಕೂಡಲೇ ನನಗೆ ಸಿಗಬೇಕಾದ ವೇತನ ಮತ್ತು ಪಿಂಚಣಿ ಸೌಲಭ್ಯಗಳನ್ನು ನೀಡುವಂತೆ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಒತ್ತಾಯಿಸಿದರು.

error: Content is protected !!