ದಾವಣಗೆರೆ, ಜ.10- ಪ್ರದರ್ಶನಕ್ಕಿಟ್ಟಿರು ವಂತೆ ಕಣ್ಣಿಗೆ ಕಾಣುವ ಕಳುವಾದ ಚಿನ್ನಾಭರಣ, ವಿವಿಧ ಬಗೆಯ ವಾಹನಗಳು, ಪ್ರಯಾಣಿಕರ ಆಟೋಗಳು, ಸಿಲಿಂಡರ್ ಗಳ ಹೊತ್ತ ಆಟೋ, ರೈತರ ನಗದುಳ್ಳ ಪೆಟ್ಟಿಗೆ, ಚಿಪ್ಪು ಹಂದಿ ಚಿಪ್ಪು ಸೇರಿದಂತೆ ಸುಮಾರು 4 ಕೋಟಿಗೂ ಅಧಿಕ ಮೌಲ್ಯದ ವಸ್ತುಗಳು. ಕಳುವಾದ ವಸ್ತುಗಳು ಯಾವಾಗ ಕೈ ಸೇರುವುದೋ ಎಂಬ ನಿರೀಕ್ಷೆ. ತಮ್ಮ ಠಾಣಾ ವ್ಯಾಪ್ತಿಯಲ್ಲಿ ಕಳುವಾದ ವಸ್ತುಗಳ ಜೋಡಿಸಿಟ್ಟ ಪೊಲೀಸರು. ವಾರಸುದಾರರಿಗೆ ಸಿದ್ಧ ವಾಗಿದ್ದ ವಸ್ತುಗಳನ್ನು ಪರಿಶೀಲಿಸಿ ಒಪ್ಪಿಸಿದ ಎಸ್ಪಿ.
ಈ ಎಲ್ಲಾ ದೃಶ್ಯಗಳು ಇಂದು ಮಧ್ಯಾಹ್ನ ನಗರದ ಪೊಲೀಸ್ ಕವಾಯತ್ತು ಮೈದಾನದಲ್ಲಿ ಕಳವು ಪ್ರಕರಣಗಳಲ್ಲಿ ವಶಪಡಿಸಿಕೊಂಡ ಸ್ವತ್ತಿನ ಪರೇಡ್ ನಲ್ಲಿ ಕಂಡು ಬಂದವು.
ಜಿಲ್ಲೆಯ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಕಳೆದ 2021 ವರ್ಷದಲ್ಲಿ ದಾಖಲಾಗಿದ್ದ ಸುಮಾರು 500 ಕಳ್ಳತನ ಪ್ರಕರಣಗಳ ಪೈಕಿ ಬೈಕ್, ಕಾರು, ಪ್ರಯಾಣಿಕರ ಆಟೋಗಳು, ಸಿಲಿಂಡರ್ ಗಳ ಸಾಗಿಸುವ ಏಜೆನ್ಸಿಯೊಂದರ ಆಟೋ, ಚಿನ್ನಾಭರಣ ಕಳ್ಳತನ ಹಾಗೂ ರೈತರ ಮೆಕ್ಕೆಜೋಳದ ವಂಚನೆ ಹಣ, ಚಿಪ್ಪು ಹಂದಿಗಳ ಚಿಪ್ಪು ವಶ ಸೇರಿದಂತೆ 250 ಪ್ರಕರಣಗಳು ಪತ್ತೆಯಾಗಿವೆ. ಈ ಪ್ರಕರಣಗಳಲ್ಲಿ 4 ಕೋಟಿ 63 ಲಕ್ಷದ 89 ಸಾವಿರದ 662 ರೂ. ಮೌಲ್ಯದ ಸ್ವತ್ತುಗಳು ವಶಪಡಿಸಿಕೊಳ್ಳಲಾಗಿದೆ.
ಹೀಗೆ ವಶಪಡಿಸಿಕೊಂಡ ಸ್ವತ್ತುಗಳನ್ನು ಅದಕ್ಕೆ ಸಂಬಂಧಿಸಿದ ವಾರಸುದಾರರಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್ ವಿತರಣೆ ಮಾಡಿದರು. ಅದಕ್ಕೂ ಮುನ್ನ ಜೋಡಿಸಿಡಲಾಗಿದ್ದ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳವಾದ ಸ್ವತ್ತುಗಳನ್ನು ವೀಕ್ಷಿಸಿದರು.
ದಾವಣಗೆರೆ ನಗರ ಉಪ ವಿಭಾಗ ವ್ಯಾಪ್ತಿಯಲ್ಲಿ 37 ಲಕ್ಷದ 32 ಸಾವಿರ ಮೌಲ್ಯದ ಚಿನ್ನಾಭರಣ, 65 ಲಕ್ಷದ 58 ಸಾವಿರ ಮೌಲ್ಯದ 84 ವಿವಿಧ ವಾಹನಗಳು, 9 ಲಕ್ಷದ 44 ಸಾವಿರ ನಗದು, ಇತರೆ ಸೇರಿ ಒಟ್ಟು 3 ಕೋಟಿ 83 ಲಕ್ಷದ 33 ಸಾವಿರ ಮೌಲ್ಯದ ಸ್ವತ್ತು. ದಾವಣಗೆರೆ ಗ್ರಾಮಾಂತರ ಉಪ ವಿಭಾಗ ವ್ಯಾಪ್ತಿಯಲ್ಲಿ 25 ಲಕ್ಷದ 23 ಸಾವಿರ ಮೌಲ್ಯದ ಚಿನ್ನಾಭರಣ, 1 ಲಕ್ಷದ 85 ಸಾವಿರ ಮೌಲ್ಯದ 4 ವಾಹನಗಳು, 3 ಲಕ್ಷದ 35 ಸಾವಿರ ನಗದು, ಇತರೆ ಸೇರಿ ಒಟ್ಟು 31 ಲಕ್ಷದ 19 ಸಾವಿರ ಮೌಲ್ಯದ ಸ್ವತ್ತು. ಚನ್ನಗಿರಿ ಉಪ ವಿಭಾಗ ವ್ಯಾಪ್ತಿಯಲ್ಲಿ 21 ಲಕ್ಷದ 56 ಸಾವಿರ ಮೌಲ್ಯದ ಚಿನ್ನಾಭರಣ, 13 ಲಕ್ಷದ 20 ಸಾವಿರ ಮೌಲ್ಯದ ವಾಹನಗಳು, 8 ಲಕ್ಷದ 77 ಸಾವಿರ ನಗದು ಹಾಗೂ ಇತರೆ ಸೇರಿ ಒಟ್ಟು 49 ಲಕ್ಷದ 36 ಸಾವಿರ ಮೌಲ್ಯದ ಸ್ವತ್ತು.
ಈ ಮೂರು ವಿಭಾಗಗಳು ಸೇರಿ ಒಟ್ಟು 84.12 ಲಕ್ಷ ಮೌಲ್ಯದ 1740.329 ಗ್ರಾಂ ಚಿನ್ನ, 1751.544 ಬೆಳ್ಳಿ. ದಾವಣಗೆರೆಯ ಬಡಾವಣೆ, ಕೆಟಿಜೆ ನಗರ, ವಿದ್ಯಾನಗರ, ಹರಿಹರ ಗ್ರಾಮಾಂತರ ಸೇರಿದಂತೆ ಇತರೆ ಪೊಲೀಸ್ ಠಾಣೆ ಪ್ರದೇಶದಲ್ಲಿ ಕಳ್ಳತನವಾಗಿದ್ದ 20 ಕಾರು, ಬೈಕ್‍ಗಳು, ಪ್ರಯಾಣಿಕರ 2 ಆಟೋ ಸೇರಿದಂತೆ ಒಟ್ಟು 80.63 ಲಕ್ಷ ಮೌಲ್ಯದ 97 ವಿವಿಧ ವಾಹನಗಳನ್ನು ಪತ್ತೆ ಮಾಡಲಾಗಿದೆ. ಇನ್ನೂ 21.56 ಲಕ್ಷ ನಗದು ಮತ್ತು 2 ಕೋಟಿ 77 ಲಕ್ಷದ 57 ಸಾವಿರದ ಇತರೇ ವಸ್ತುಗಳು ಸೇರಿದಂತೆ ಒಟ್ಟು 4 ಕೋಟಿ 63 ಲಕ್ಷದ 89 ಸಾವಿರದ 662 ರೂ ಮೌಲ್ಯದ ಸ್ವತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಎಸ್ಪಿ ಸಿ.ಬಿ. ರಿಷ್ಯಂತ್ ಸುದ್ದಿಗಾರರಿಗೆ ಮಾಹಿತಿ ನೀಡಿದರು.
ರೈತರ ಕೈ ಸೇರಿದ ವಂಚನೆಯಾಗಿದ್ದ ಹಣ : ಮೆಕ್ಕೆಜೋಳ ಖರೀದಿಸಿ ರೈತರು ಮತ್ತು ವರ್ತಕರಿಂದ ಮೆಕ್ಕೆಜೋಳ ಖರೀದಿಸಿ ಹಣ ನೀಡದೇ ವಂಚಿಸಿದ್ದ ಪ್ರಕರಣ ಆರ್‍ಎಂಸಿ ಯಾರ್ಡ್‍ನ ಪೊಲೀಸ್ ಠಾಣೆಯಲ್ಲಿ ದಾಖಲಾಗಿತ್ತು. ವಿಶೇಷವಾದ ಈ ಪ್ರಕರಣವನ್ನು ವಿಶೇಷ ತಂಡ ತನಿಖೆ ನಡೆಸಿ, ರೈತರ 1 ಕೋಟಿ 51 ಲಕ್ಷದ 86 ಸಾವಿರ ರೂ. ಹಾಗೂ ವರ್ತಕರ 1 ಕೋಟಿ 16 ಲಕ್ಷ ರೂ. ಸೇರಿ ಒಟ್ಟು 2 ಕೋಟಿ 76 ಲಕ್ಷದ 91 ಸಾವಿರ ರೂ ಪತ್ತೆ ಮಾಡಿತ್ತು. ಈ ಹಣವನ್ನು ಸಂಬಂಧಿಸಿದ ರೈತರು, ವರ್ತಕರಿಗೆ ಹಿಂದಿರುಗಿಸಲಾಯಿತು.
67 ಕೆ.ಜಿ. ಚಿಪ್ಪು ಹಂದಿ ಚಿಪ್ಪು: ಚಿಪ್ಪು ಹಂದಿಗಳ ಚಿಪ್ಪನ್ನು ಶಿವಮೊಗ್ಗ ಜಿಲ್ಲೆಯಿಂದ ಮಹಾರಾಷ್ಟ್ರಕ್ಕೆ ಸಾಗಾಟ ಮಾಡುತ್ತಿದ್ದ ಪ್ರಕರಣ ಬೇಧಿಸಿ ಇಲ್ಲಿನ ಸಿಇಎನ್ ಅಪರಾಧ ಪೊಲೀಸರು 18 ಮಂದಿ ಆರೋಪಿಗಳನ್ನು ಬಂಧಿಸಿದ್ದರು. 67 ಕೆ.ಜಿ.ಯಷ್ಟು ಚಿಪ್ಪನ್ನು ವಶಪಡಿಸಿಕೊಳ್ಳಲಾಗಿತ್ತು. ಪ್ರಾಣಿ ರಕ್ಷಣೆ ಕಾಯ್ದೆಯಡಿ ಆರೋಪಿಗಳ ಮೇಲೆ ಪ್ರಕರಣ ದಾಖಲಾಗಿದೆ ಎಂದು ಎಸ್ಪಿ ಸಿ.ಬಿ. ರಿಷ್ಯಂತ್ ತಿಳಿಸಿದರು. ಈ ಚಿಪ್ಪನ್ನು ಅರಣ್ಯ ಇಲಾಖೆಗೆ ಹಸ್ತಾಂತರ ಮಾಡಲಾಗಿದೆ. ಈ ಚಿಪ್ಪನ್ನು ಔಷಧಿ ಮತ್ತು ಬುಲೆಟ್ ಪ್ರೂಪ್‍ಗೆ ಬಳಕೆ ಮಾಡಿಕೊಳ್ಳಲಾಗುತ್ತದೆ ಎಂಬ ಮಾಹಿತಿ ನೀಡಲಾಯಿತು.
ಓ.ಜಿ. ಕುಪ್ಪಂ ಗ್ಯಾಂಗ್‍ನ 25 ಮಂದಿ ಬಂಧನ : ಸಾರ್ವಜನಿಕರ ಗಮನವನ್ನು ಬೇರೆಡೆಗೆ ಸೆಳೆದು ಅವರ ಬಳಿ ಇದ್ದ ಹಣವನ್ನು ಕಳ್ಳತನ ಮಾಡುತ್ತಿದ್ದ ಓ.ಜಿ. ಕುಪ್ಪಂ ಗ್ಯಾಂಗ್‍ನ 25 ಜನ ಕಳ್ಳರನ್ನು ಬಂಧಿಸಲಾಗಿದೆ. ಜಿಲ್ಲೆಯಲ್ಲಿ ಜನರ ಗಮನವನ್ನು ಬೇರೆಡೆಗೆ ಸೆಳೆದು ಅವರಿಂದ ಹಣ ಕಳ್ಳತನ ಮಾಡಲಾಗುತ್ತಿತ್ತು. ಇಂತಹ ಬಹಳಷ್ಟು ಪ್ರಕರಣಗಳು ಬ್ಯಾಂಕ್‍ಗಳ ಮುಂದೆ ನಡೆಯುತ್ತಿದ್ದವು. ಇದು ಆಂಧ್ರ ಪ್ರದೇಶದ ಓ.ಜಿ. ಕುಪ್ಪಂ ಗ್ಯಾಂಗ್‍ನ ಕೃತ್ಯ ಎಂದು ಕಂಡು ಬಂದಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರು ಈ ತಂಡದ ಹಿಂದೆ ಬಿದ್ದು 25 ಜನರನ್ನು ಬಂಧಿಸಿದ್ದಾರೆ. ಇದು ಪೊಲೀಸ್ ಇಲಾಖೆಗೆ ಹೆಮ್ಮಯ ಸಂಗತಿ ಎಂದು ಎಸ್ಪಿ ರಿಷ್ಯಂತ್ ತಿಳಿಸಿದರು.