ಶೀಘ್ರದಲ್ಲೇ ಸಂಪಾದಕರ ಸಂಘದ ರಾಜ್ಯ ಸಮ್ಮೇಳನ

ದಾವಣಗೆರೆ, ಡಿ.25- ಕರ್ನಾಟಕ ಕಾರ್ಯನಿರತ ದಿನಪತ್ರಿಕೆಗಳ ಸಂಪಾದಕರ ಸಂಘದ ವತಿಯಿಂದ ಬರುವ ಜನವರಿ ತಿಂಗಳ ಕೊನೆ ವಾರದಲ್ಲಿ ರಾಜ್ಯಮಟ್ಟದ `ಪ್ರಪ್ರಥಮ ಸಮ್ಮೇಳನ’ ಹಮ್ಮಿಕೊಳ್ಳಲಿದ್ದೇವೆ ಎಂದು ಸಂಘದ ರಾಜ್ಯಾಧ್ಯಕ್ಷ ಎ.ಸಿ. ತಿಪ್ಪೇಸ್ವಾಮಿ ತಿಳಿಸಿದರು.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮ್ಮೇಳನವನ್ನು ಗದಗ ನಗರದಲ್ಲಿ ಹಮ್ಮಿಕೊಳ್ಳುವ ತೀರ್ಮಾನ ಮಾಡಲಾಗಿದ್ದು, ಕಾನೂನು ಸಚಿವ ಹೆಚ್‌.ಕೆ. ಪಾಟೀಲ್‌ ಅವರ ಅಧ್ಯಕ್ಷತೆಯಲ್ಲಿ ಸಮ್ಮೇಳನ ನಡೆಯಲಿದೆ ಎಂದು ಹೇಳಿದರು.

ವಾರ್ತಾ ಇಲಾಖೆ ಮಾನ್ಯತೆ ಹೊಂದಿದ ಜಾಹೀರಾತು ಸಂಸ್ಥೆಗಳ ಮೂಲಕ ಬಿಡುಗಡೆ ಮಾಡುವ ಜಾಹೀರಾತುಗಳು, ಟೆಂಡರ್‌ ಹಾಗೂ ವರ್ಗೀಕೃತ ಜಾಹೀರಾತುಗಳ ಒಟ್ಟು ಬಿಲ್ಲಿನ ಮೊತ್ತದಲ್ಲಿ ಶೇ.15ರಷ್ಟು ಕಮೀಷನ್‌ ಕಡಿತಗೊಳಿಸುವುದು ಕಾನೂನು ಬಾಹಿರ ವಾಗಿದೆ. ಈ ಕುರಿತು ಸಂಬಂಧಿಸಿದ ಅಧಿಕಾರಿಗಳು ಹಾಗೂ ಸಿಎಂ ಬಳಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ ಎಂದು ದೂರಿದರು.

2023ರ ಎಪ್ರಿಲ್‌ 1ರಿಂದ ಜಿಲ್ಲಾ ಮತ್ತು ಪ್ರಾದೇಶಿಕ ಪತ್ರಿಕೆಗಳಿಗೆ ನಿಯಮಾನುಸಾರ ಹಾಲಿ ಜಾಹಿರಾತು ದರಕ್ಕೆ ಶೇ.12ರಷ್ಟು ದರ ಹೆಚ್ಚಿಸಬೇಕು.  ಏಜೆನ್ಸಿಗಳು ಕಡಿತಗೊಳಿಸುತ್ತಿರುವ ಕಮಿಷನ್ ಹಣ ತಕ್ಷಣಕ್ಕೆ ನಿಲ್ಲಿಸಬೇಕು ಎಂದು ಒತ್ತಾಯಿಸಿದರು.

ಐದು ವರ್ಷದೊಳಗಿನ ಒಬಿಸಿ, ಬ್ರಾಹ್ಮಣ ಸಮುದಾಯದ ಪತ್ರಿಕೆಗಳ ಏಳಿಗೆಗೆ ಸಹಕಾರ ನೀಡುವ ಹಿತದೃಷ್ಟಿಯಿಂದ ಸರ್ಕಾರ ಪ್ರೋತ್ಸಾಹ ರೂಪದ ಮಾಸಿಕ 1 ಪುಟದ ಜಾಹೀರಾತನ್ನು ವಾರ್ತಾ ಇಲಾಖೆಯಿಂದ ಬಿಡುಗಡೆ ಮಾಡುವುದಕ್ಕೆ ಸರ್ಕಾರ ಆದೇಶ ಹೊರಡಿಸಬೇಕು ಎಂದು ಆಗ್ರಹಿಸಿದರು.

ಸರ್ಕಾರವು ಪತ್ರಿಕೆಗಳ ಜಾಹೀರಾತು ಬಿಲ್ಲುಗಳನ್ನು ಪಾವತಿ ಮಾಡುವುದಕ್ಕೆ ವಾರ್ತಾ ಇಲಾಖೆಗೆ 65 ಕೋಟಿ ರೂ.ಗಳ ಹೆಚ್ಚುವರಿ ಅನುದಾನ ಬಿಡುಗಡೆಗೊಳಿಸಬೇಕೆಂದರು.

ಈ ವೇಳೆ ಬಿ. ವಾಸುದೇವ, ಕೆ.ಜೈಮುನಿ, ಸುರೇಶ್‌ ಆರ್‌. ಕುಣೇಬೆಳಕೆರೆ, ಗೋವರ್ಧನ ಗಿರಿಶ್ಯಾಮ್‌, ಕೆ.ಆರ್. ಗಂಗರಾಜು, ಶಿವಮೂರ್ತಿ ಇತರರು ಇದ್ದರು.

error: Content is protected !!