ರಾಣೇಬೆನ್ನೂರು, ಜ. 15- ಸ್ಪಟಿಕ ಲಿಂಗ ಹಾಗೂ ಪಚ್ಚೆ ಲಿಂಗಗಳ ಪ್ರಾಣ ಪ್ರತಿಷ್ಠಾಪನೆ, ಕಾಶಿ ಜಗದ್ಗುರು ಡಾ. ಮಲ್ಲಿಕಾರ್ಜುನ ವಿಶ್ವಾರಾಧ್ಯ ಶಿವಾಚಾರ್ಯ ಸ್ವಾಮೀಜಿಯವರ ಅಡ್ಡಪಲ್ಲಕ್ಕಿ ಉತ್ಸವ ಹಾಗೂ ಪೀಠಾಧಿಪತಿ ಶ್ರೀ ವೀರಭದ್ರ ಸ್ವಾಮಿಗಳ ಪೀಠಾಧಿ ಕಾರದ ರಜತ ಮಹೋತ್ಸವದ ಸಮಾರಂಭವು ತಾಲ್ಲೂಕಿನ ಲಿಂಗದಹಳ್ಳಿ ಹಿರೇಮಠದಲ್ಲಿ ಎರಡು ದಿನಗಳ ಕಾಲ ವಿಜೃಂಭಣೆಯಿಂದ ಜರುಗಲಿದೆ ಎಂದು ವೀರಭದ್ರ ಶ್ರೀಗಳು ತಿಳಿಸಿದ್ದಾರೆ.
ಮಠದಲ್ಲಿನ ಕಳ್ಳತನವಾದ 8 ನೇ ಶತಮಾನದ ಸ್ಪಟಿಕ ಲಿಂಗ ಇದುವರೆಗೂ ಪತ್ತೆಯಾಗದಿದ್ದರಿಂದ ಭಕ್ತರ ಅಪೇಕ್ಷೆಯಂತೆ ಸುಮಾರು ಒಂದು ಕೋಟಿ ರೂ.ಗೂ ಅಧಿಕ ವೆಚ್ಚದಲ್ಲಿ ಏಷಿಯಾ ಖಂಡದಲ್ಲಿಯೇ ದೊಡ್ದದಾದ 1.5 ಅಡಿ ಎತ್ತರ 10 ಇಂಚು ಅಗಲದ ಸ್ಪಟಿಕ ಲಿಂಗ ಹಾಗೂ 4 ಪಚ್ಚೆ ಲಿಂಗ ಪ್ರತಿಷ್ಠಾಪಿಸಲಾಗಿದ್ದು, ಪ್ರಾಣ ಪ್ರತಿಷ್ಠಾಪನೆ ಇದೇ ದಿನಾಂಕ 23 ರಂದು ನಡೆಯಲಿದೆ.
ಕೊಟ್ಟೂರಿನ ಧಾರ್ಮಿಕ ಸಮಾರಂಭದಲ್ಲಿ ಭಾಗವಹಿಸಿದ ಸಂದರ್ಭದಲ್ಲಿ ಮಠದಲ್ಲಿ ಕಳ್ಳತನವಾಗಿತ್ತು. ಅಂದಿನಿಂದ ನಮಗೆ ಹಾಗೂ ನಮ್ಮ ಭಕ್ತರಿಗೆ ನೆಮ್ಮದಿ ಇಲ್ಲದಂತಾಗಿತ್ತು. ನೌಕರಿಯಿಂದ ಬರುವ ವೇತನ, ಭಕ್ತರು ನೀಡಿದ ದೇಣಿಗೆ, ನಮ್ಮ ಇನ್ಷೂರೆನ್ಸ್ ಮೇಲೆ ಬ್ಯಾಂಕ್ ಹಾಗೂ ಹೆಸ್ಕಾಂ ಸಹಕಾರಿ ಸಂಘದಲ್ಲಿ ಸಾಲ ತೆಗೆಸಿ ಸ್ಪಟಿಕ ಲಿಂಗ ತರಿಸಲಾಗಿದೆ. ರಕ್ಷಣೆಗೆ ಸಿಸಿ ಕ್ಯಾಮೆರಾ ಹಾಗೂ ಸೇಫ್ ಲಾಕರ್ ಅಳವಡಿಸಲಾಗಿದೆ ಎಂದು ಶ್ರೀಗಳು ಹೇಳಿದರು.
ತೊಗರ್ಸಿ ಮಹಾಂತ ದೇಶಿ ಕೇಂದ್ರ ಶ್ರೀಗಳು, ಗೋಣಿಬೀಡು ಸಿದ್ಧಲಿಂಗ ಶ್ರೀಗಳು, ಕವಲೇದುರ್ಗ ಮರುಳಸಿದ್ಧ ಶ್ರೀಗಳು, ರಟ್ಟಿಹಳ್ಳಿ ಶಿವಲಿಂಗ ಶ್ರೀಗಳು, ದಿಂಡದಹಳ್ಳಿ ಪಶುಪತಿ ಶ್ರೀಗಳು, ಮಣಕೂರ ಮಲ್ಲಿಕಾರ್ಜುನ ಶ್ರೀಗಳು, ನರಸಾಪುರದ ಶಿವಕುಮಾರ ಶ್ರೀಗಳು ಪಾಲ್ಗೊಳ್ಳಲಿದ್ದಾರೆ.
ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಕಾರ್ಯಕ್ರಮ ಉದ್ಘಾಟಿಸಲಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ, ಶಾಸಕರಾದ ಅರುಣಕುಮಾರ್ ಪೂಜಾರ್, ಆರ್. ಶಂಕರ್, ಎಸ್. ರಾಮಪ್ಪ, ಮಾಜಿ ಸಭಾಪತಿ ಕೆ.ಬಿ. ಕೋಳಿವಾಡ, ಸಾರಿಗೆ ಸಂಸ್ಥೆ ಉಪಾಧ್ಯಕ್ಷ ಡಾ. ಬಸವರಾಜ ಕೇಲಗಾರ, ನಿರ್ದೇಶಕ ಸಂತೋಷ ಪಾಟೀಲ, ಸಚಿವರು, ಜನಪ್ರತಿನಿಧಿಗಳು ಭಾಗವಹಿಸುವರು. ಇದೇ ದಿನಾಂಕ 22 ರಂದು ಧಾರ್ಮಿಕ ವಿಧಿ ವಿಧಾನಗಳು ನಡೆಯಲಿವೆ ಎಂದು ಶ್ರೀಗಳು ವಿವರಿಸಿದರು.