ಜಿಲ್ಲೆಯಲ್ಲಿ 10 ಸಾವಿರ ಯೋಗ ಪಟುಗಳು ಭಾಗವಹಿಸುವ ನಿರೀಕ್ಷೆ: ಜಿಲ್ಲಾಧಿಕಾರಿ ಕಾಪಶಿ
ದಾವಣಗೆರೆ, ಜ. 13 – ರಾಜ್ಯ ಸರ್ಕಾರದ ವತಿಯಿಂದ ಆಯೋಜಿಸಲಾಗಿ ರುವ ಯೋಗಥಾನ್ 2022ರ ಅಂಗವಾಗಿ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಜ.15ರ ಭಾನುವಾರ ಬೆಳಿಗ್ಗೆ 6 ಗಂಟೆಯಿಂದ ಯೋಗಾಸನ ಪ್ರದರ್ಶನ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ಕ್ರೀಡಾ ಇಲಾಖೆ, ಆಯುಷ್ ಇಲಾಖೆ, ಆಯುಷ್ ಟಿವಿ ಹಾಗೂ ದಾವಣಗೆರೆ ಜಿಲ್ಲಾ ಯೋಗ ಒಕ್ಕೂಟಗಳ ಸಂಯುಕ್ತಾಶ್ರಯದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ. ಪಾಲ್ಗೊಳ್ಳಲು ಬಯಸುವವರು https://www.yogathon2022.com ವೆಬ್ ತಾಣದಲ್ಲಿ ನೋಂದಾಯಿಸಿ ಕೊಳ್ಳ ಬಹುದು ಎಂದು ಹೇಳಿದರು.
ಯೋಗದ ಅರಿವು ಮೂಡಿಸಲು ಹಾಗೂ ರೋಗ ಮುಕ್ತ ಕರ್ನಾಟಕವಾಗಿಸಲು ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ರಾಜ್ಯಾದ್ಯಂತ ಈ ಕಾರ್ಯಕ್ರಮದಲ್ಲಿ 5 ಲಕ್ಷ ಜನ ಭಾಗವಹಿಸುವ ನಿರೀಕ್ಷೆ ಇದೆ. ಜಿಲ್ಲೆಯಿಂದ 6 ಸಾವಿರ ಜನರು ಪಾಲ್ಗೊಳ್ಳುವ ಗುರಿ ನೀಡಲಾಗಿದೆ. ನಮಗೆ 8ರಿಂದ 10 ಸಾವಿರ ಜನರ ನಿರೀಕ್ಷೆ ಇದೆ ಎಂದರು.
ಅಂದು ಬೆಳಿಗ್ಗೆ 6 ಗಂಟೆಗೆ ಪ್ರವೇಶ ಆರಂಭವಾಗಲಿದೆ. 8.13ರಿಂದ 9 ಗಂಟೆಯವರೆಗೆ ಯೋಗಾಸನ ಪ್ರದರ್ಶನ ನಡೆಯಲಿದೆ. ಏಕಕಾಲಕ್ಕೆ ಐದು ಲಕ್ಷ ಜನ ಯೋಗ ಮಾಡುವ ಮೂಲಕ ಗಿನ್ನಿಸ್ ದಾಖ ಲೆಯ ಗುರಿ ಇದೆ. ಈ ಹಿಂದೆ ರಾಜಸ್ಥಾನದಲ್ಲಿ 2 ಲಕ್ಷ ಜನ ಯೋಗ ಮಾಡಿದ್ದು ದಾಖಲೆಯಾಗಿತ್ತು ಎಂದವರು ಹೇಳಿದರು.
ವಿದ್ಯಾರ್ಥಿಗಳು ಹೆಚ್ಚಾಗಿ ಈ ಕಾರ್ಯ ಕ್ರಮದಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ. ಪ್ರತಿ 50 ವಿದ್ಯಾರ್ಥಿಗಳಿಗೆ ಒಬ್ಬ ಮೇಲ್ವಿಚಾರಕ ಹಾಗೂ ಸಾವಿರ ವಿದ್ಯಾರ್ಥಿಗಳಿಗೆ ಒಬ್ಬ ತರಬೇತುದಾರ ಇರಲಿದ್ದಾರೆ. ಕಾರ್ಯಕ್ರಮಕ್ಕಾಗಿ 20 ಚಿಕ್ಕ ವೇದಿಕೆಗಳನ್ನು ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.
ಜಿಲ್ಲೆಯ ಯೋಗ ಕಾರ್ಯಕ್ರಮದ ಉದ್ಘಾಟನೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ ನೆರವೇರಿಸಲಿದ್ದಾರೆ. ಶಾಸಕ ಎಸ್.ಎ. ರವೀಂದ್ರನಾಥ್ ಅಧ್ಯಕ್ಷತೆ ವಹಿಸಿಕೊಳ್ಳಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಸಂಸದ ಜಿ.ಎಂ. ಸಿದ್ದೇಶ್ವರ, ಶಾಸಕರಾದ ಶಾಮನೂರು ಶಿವಶಂಕರಪ್ಪ, ಎಂ.ಪಿ. ರೇಣುಕಾಚಾರ್ಯ, ಮಾಡಾಳ್ ವಿರೂಪಾಕ್ಷಪ್ಪ, ಎಸ್.ವಿ.ರಾಮಚಂದ್ರ, ಪ್ರೊ. ಎನ್. ಲಿಂಗಣ್ಣ, ಮೇಯರ್ ಆರ್. ಜಯಮ್ಮ ಗೋಪಿನಾಯ್ಕ ಮತ್ತಿತರರು ಭಾಗವಹಿಸಲಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕ ರವೀಂದ್ರ ಮಲ್ಲಾಪುರ, ಜಿಲ್ಲಾ ಆಯುಷ್ ಅಧಿಕಾರಿ ಡಾ. ಶಂಕರ್ ಗೌಡ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರವಿಚಂದ್ರ, ಜಿಲ್ಲಾ ಯೋಗ ಒಕ್ಕೂಟದ ಅಧ್ಯಕ್ಷ ವಾಸುದೇವ ರಾಯ್ಕರ್ ಮತ್ತಿತರರು ಉಪಸ್ಥಿತರಿದ್ದರು.