ಭಾರತದ ಹಣೆ ಬರಹವನ್ನು ಯುವಶಕ್ತಿ ನಿರ್ಧರಿಸಲಿದೆ : ಮೋದಿ

ಭಾರತದ ಹಣೆ ಬರಹವನ್ನು ಯುವಶಕ್ತಿ ನಿರ್ಧರಿಸಲಿದೆ : ಮೋದಿ - Janathavaniಹುಬ್ಬಳ್ಳಿ, ಜ. 12 – ಭಾರತವನ್ನು ಬೆಳವಣಿಗೆಯ ಹಾದಿಯಲ್ಲಿ ಮುಂದುವರೆಸುತ್ತಿರುವುದು ಯುವ ಶಕ್ತಿ. ಯುವಶಕ್ತಿಯೇ ಭಾರತದ ಹಣೇ ಬರಹ ನಿರ್ಧರಿಸಲಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.

ಸ್ವಾಮಿ ವಿವೇಕಾನಂದರ ಜನ್ಮ ದಿನದ ಅಂಗವಾಗಿ ಆಯೋಜಿಸಲಾಗಿದ್ದ ರಾಷ್ಟ್ರೀಯ ಯುವ ಜನೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು.  ಮುಂದಿನ 25 ವರ್ಷಗಳಲ್ಲಿ ಭಾರತದ ನಿರ್ಮಾಣದಲ್ಲಿ ಯುವ ಶಕ್ತಿಯ ಪಾತ್ರ ಮಹತ್ವದ್ದಾಗಿದೆ. ಈ ಯುವ ಶಕ್ತಿಯ ಬಲ ಪಡೆಯಲು ನಾವು ಚಿಂತನೆ ಹಾಗೂ ಪ್ರಯತ್ನದಲ್ಲಿ ಯುವಕರಾಗಿರಬೇಕಿದೆ ಎಂದು ಹೇಳಿದರು.

ಭಾರತ ಈಗ ವಿಶ್ವದ ಐದನೇ ಅತಿ ದೊಡ್ಡ ಆರ್ಥಿಕ ಶಕ್ತಿಯಾಗಿದೆ. ಮುಂದಿನ ದಿನಗಳಲ್ಲಿ ಭಾರತ ಮೊದಲ ಮೂರು ಸ್ಥಾನಕ್ಕೆ ಬರಬೇಕಿದೆ. ಭಾರತ ಆರ್ಥಿಕ ಶಕ್ತಿಯಾಗಿ ಬೆಳೆಯುವುದರಿಂದ ಯುವಕರಿಗೆ ಹೆಚ್ಚು ಅವಕಾಶಗಳು ಸಿಗುತ್ತವೆ ಎಂದು ಮೋದಿ ಹೇಳಿದರು.

ಇದು ಇತಿಹಾಸದಲ್ಲಿ ವಿಶೇಷ ಸಮಯ, ನೀವು ವಿಶೇಷ ಪೀಳಿಗೆ, ನೀವು ವಿಶೇಷ ಗುರಿ ಹೊಂದಿದ್ದೀರಿ. ಆ ಗುರಿಯತ್ತ ನಿಮ್ಮ ಪಯಣ ವಿಶ್ವದಾದ್ಯಂತ ಪರಿಣಾಮ ಬೀರಲಿದೆ ಎಂದವರು ಹೇಳಿದರು.

ಕಳೆದ 8-9 ವರ್ಷಗಳಲ್ಲಿ ಆರ್ಥಿ ಕತೆ, ಶಿಕ್ಷಣ, ಕ್ರೀಡೆ, ನವೋದ್ಯಮ ಹಾಗೂ ಕೌಶಲ್ಯ ಸೇರಿದಂತೆ, ಎಲ್ಲ ವಲಯ ಗಳಲ್ಲಿ ಅಡಿಪಾಯ ಹಾಕ ಲಾಗಿದೆ. ಈಗ ರನ್‌ವೇ ಸಿದ್ಧವಾಗಿದೆ, ನೀವು ಟೇಕಾಫ್ ಆಗಬೇಕಿದೆ ಎಂದು ಮೋದಿ ಹೇಳಿದರು.

ಈ ಶತಮಾನ ಭಾರತದ್ದಾಗಿದೆ, ಈ ಶತಮಾನ ಭಾರತದ ಯುವಕರದ್ದಾಗಿದೆ. ಜಾಗತಿಕ ಹೂಡಿಕೆದಾರರು ಭಾರತಕ್ಕೆ ಬರಲು ಬಯಸಿದ್ದಾರೆ ಎಂದು ಸಮೀಕ್ಷೆಗಳು ತಿಳಿಸಿವೆ. ಹೂಡಿಕೆದಾರರು ಭಾರತದ ಯುವಕರತ್ತ ಬರುತ್ತಿದ್ದಾರೆ ಎಂದವರು ಹೇಳಿದರು. ಆಟಿಕೆಗಳಿಂದ ಹಿಡಿದು ಪ್ರವಾಸೋದ್ಯಮದವರೆಗೆ, ರಕ್ಷಣೆಯಿಂದ ಹಿಡಿದು ಡಿಜಿಟಲ್‌ವರೆಗೆ ಭಾರತ ವಿಶ್ವದಾದ್ಯಂತ ಹೆಸರು ಮಾಡುತ್ತಿದೆ ಎಂದವರು ತಿಳಿಸಿದರು. ರೈಲ್ವೆ ಮೈದಾನದಲ್ಲಿ ಆಯೋಜಿಸಲಾಗಿದ್ದ ಸಮಾರಂಭದಲ್ಲಿ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ ಹಾಗೂ ಅನುರಾಗ್ ಠಾಕೂರ್ ಮತ್ತಿತರರು ಉಪಸ್ಥಿತರಿದ್ದರು.

error: Content is protected !!