ಜಲ್ಲಿ ಕ್ವಾರಿ ಮಾಲೀಕರ ಮುಷ್ಕರ : ಸ್ಥಗಿತಗೊಂಡ ಕಾಮಗಾರಿಗಳು

ಡ್ರೋನ್ ಸರ್ವೇ ವರದಿಯಂತೆ ಕ್ವಾರಿ ಮಾಲೀಕರು 5 ಪಟ್ಟು ಹೆಚ್ಚುವರಿ ರಾಜಸ್ವ ತುಂಬಿ ಗುತ್ತಿಗೆ ನವೀಕರಿಸಬೇಕು ಎಂಬ ಆದೇಶವನ್ನು ವಿರೋಧಿಸಿ ಪ್ರತಿಭಟನೆ

ದಾವಣಗೆರೆ, ಜ. 5- ಡ್ರೋನ್ ಸರ್ವೇ ವರದಿಯಂತೆ ಕ್ವಾರಿ ಮಾಲೀಕರು 5 ಪಟ್ಟು ಹೆಚ್ಚುವರಿ ರಾಜಸ್ವ ತುಂಬಿ ಗುತ್ತಿಗೆ ನವೀಕರಿಸಬೇಕು ಎಂಬ ಆದೇಶ ವಿರೋಧಿಸಿ, ರಾಜ್ಯದಲ್ಲಿ ಜಲ್ಲಿ ಕ್ವಾರಿ ಮಾಲೀಕರು ಮುಷ್ಕರ ನಡೆಸುತ್ತಿದ್ದಾರೆ.

ಮುಷ್ಕರದ ಪರಿಣಾಮ ನಿರ್ಮಾಣ ಕಾರ್ಯಗಳು ಸ್ಥಗಿತವಾಗಿ ಕೋಟ್ಯಂತರ ರೂ. ನಷ್ಟವಾಗುತ್ತಿದೆ. ಕಟ್ಟಡ ಕಾರ್ಮಿಕರ ಸಹಿತ ದೊಡ್ಡ ಸಂಖ್ಯೆಯಲ್ಲಿ ನಿರುದ್ಯೋಗ ಉಂಟಾಗಿದೆ. ಜಿಲ್ಲಾ ಪಂಚಾಯತಿ ಇಂಜಿನಿಯರಿಂಗ್ ವಿಭಾಗ ಹಾಗೂ ಸ್ಮಾರ್ಟ್ ಸಿಟಿ, ಪಿಡಬ್ಲ್ಯೂಡಿ ಕಾಮಗಾರಿಗಳು ಕಳೆದ ಎರಡು ವಾರಗಳಿಂದ ನಿಂತು ಹೋಗಿವೆ.

ಜಲ್ಲಿ ಜೊತೆಗೆ ನಿರ್ಮಾಣಕ್ಕೆ ಬೇಕಾದ ಎಂ.ಸ್ಯಾಂಡ್, ಕಲ್ಲಿನ ಪುಡಿ ಎಲ್ಲವೂ ಸ್ಥಗಿತಗೊಂಡಿದೆ. ಸರ್ಕಾರದ ಮಟ್ಟದಲ್ಲಿ ಕ್ರಷರ್ ಮಾಲೀಕರೊಂದಿಗೆ ಮಾತುಕತೆ ನಡೆದಿದೆ. ಆದರೆ ಈ ಕುರಿತು ಪ್ರತಿಕ್ರಿಯೆ ನೀಡಲು ರಾಜ್ಯ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು ನಿರಾಕರಿಸಿದ್ದಾರೆ.

ಮುಷ್ಕರ 13 ನೇ ದಿನಕ್ಕೆ ಕಾಲಿಟ್ಟಿದ್ದರ ಪರಿಣಾಮ ಬಹುತೇಕ ಕಟ್ಟಡ ಕಾಮಗಾರಿಗಳು ಸ್ಥಗಿತಗೊಂಡಿದ್ದು, ಕೂಲಿ ಕಾರ್ಮಿಕರು ಬೀದಿಗೆ ಬೀಳುವಂತಾಗಿದೆ. ಕ್ರಷರ್ ಸ್ಥಗಿತದಿಂದ ಇದೇ ವೃತ್ತಿಯನ್ನು ನಂಬಿ ಬದುಕುತ್ತಿರುವ ಸಾವಿರಾರು ಕುಟುಂಬಗಳು ಸಂಕಷ್ಟಕ್ಕೀಡಾಗಿವೆ.

ದಾವಣಗೆರೆಗೆ ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲ್ಲೂಕಿನ ಉಚ್ಚಂಗಿದುರ್ಗ ಹಾಗೂ ಬೇವಿನಹಳ್ಳಿ , ಅನಂತನಹಳ್ಳಿ ಭಾಗದಿಂದ ಸರಾಸರಿ 200 ಲಾರಿಗಳು ಬರುತ್ತಿದ್ದವು. ಕಳೆದ 13 ದಿನಗಳಿಂದ ಸಂಪೂರ್ಣ ಬಂದ್ ಆಗಿವೆ. ಈ ಭಾಗದ 40 ಕ್ರಷರ್ ಗಳಿಂದ ಪ್ರತಿ ದಿನ 5000 ಟನ್ ದಾವಣಗೆರೆಯ ಸರ್ಕಾರಿ ಹಾಗೂ ಖಾಸಗಿ ಕಾಮಗಾರಿಗಳಿಗೆ ಸರಬರಾಜಾಗುತ್ತಿರುವುದು ಸ್ಥಗಿತಗೊಂಡಿದೆ.

ಡ್ರೋನ್ ಸರ್ವೆ ಅವೈಜ್ಞಾನಿಕವಾಗಿದ್ದು, ವರದಿಯ ಅನ್ವಯ ಐದು ಪಟ್ಟು ಗೌರವ ಧನ ಕಟ್ಟಲು ಸಾಧ್ಯವಿಲ್ಲ. ಪರಿಸರ ವಿಚಾರದ ಕೆಎಂಎಂಪಿ ಕಾನೂನು ತಿದ್ದುಪಡಿ ಆಗಬೇಕು. ಸರ್ಕಾರಿ ಭೂಮಿಯಲ್ಲಿ ಗಣಿಗಾರಿಕೆಗೆ ಅವಕಾಶ ನೀಡಬೇಕೆಂದು ಜಲ್ಲಿ ಕ್ವಾರಿ ಮಾಲೀಕರ ಸಂಘದ ದಾವಣಗೆರೆ ಜಿಲ್ಲಾ ಗೌರವಾಧ್ಯಕ್ಷ ಎಸ್.ಎಸ್. ಗಣೇಶ್, ಜಿಲ್ಲಾಧ್ಯಕ್ಷ ಎ.ಹೆಚ್.ಕುಬೇರಪ್ಪ ಮತ್ತಿತರರು ಒತ್ತಾಯಿಸಿದ್ದಾರೆ.

ಗಣಿ ಗುತ್ತಿಗೆದಾರರಿಂದ ರಾಜಧನ ಸಂಗ್ರಹಿಸುವುದನ್ನು ನಿಲ್ಲಿಸಬೇಕು ಮತ್ತು ಕರ್ನಾಟಕ ಉಪ ಖನಿಜ ರಿಯಾಯಿತಿ ನಿಯಮಾವಳಿಗಳಿಗೆ ತಿದ್ದುಪಡಿ ತರಬೇಕೆಂದು ಸಂಘದ ಹರಪನಹಳ್ಳಿ ತಾಲ್ಲೂಕು ಅಧ್ಯಕ್ಷ ಯಶವಂತಗೌಡ್ರು, ದಾವಣಗೆರೆ ತಾಲ್ಲೂಕು ಅಧ್ಯಕ್ಷ ಎನ್. ಮರುಳಸಿದ್ಧೇಶ್ವರ, ಇತರೆ ಪದಾಧಿಕಾರಿಗಳಾದ ಹೊನ್ನೂರು ಗಿರೀಶ್, ರಾಜಶೇಖರಗೌಡ್ರು, ರವಿಗೌಡ, ಮಹಬಲೇಶ ನಾಯಕರು, ಕಲ್ಲಳ್ಳಿ ರಾಕೇಶ್, ಎಟಿಕೆ ರಮೇಶ್, ನಾಗರಾಜಗೌಡ, ಕಾವಲಹಳ್ಳಿ ಜನಾರ್ದನ, ಹೊನ್ನಳ್ಳಿ ಧನಂಜಯ ಸೇರಿದಂತೆ ಕ್ರಷರ್ ಮಾಲೀಕರು ಆಗ್ರಹಿಸಿದ್ದಾರೆ.

ಸರ್ಕಾರ ಬೇಡಿಕೆ ಈಡೇರಿಸದಿದ್ದರೆ ವಿಧಾನಸೌಧಕ್ಕೆ ಮುತ್ತಿಗೆ ಹಾಕುವುದಾಗಿ ಬೆಂಗಳೂರು ನಗರ ಜಿಲ್ಲಾ ಸ್ಟೋನ್ ಕ್ರಷರ್ಸ್ ಅಂಡ್ ಓನರ್ಸ್ ಅಸೋಸಿಯೇಷನ್ ಎಚ್ಚರಿಕೆ ನೀಡಿದೆ. 

error: Content is protected !!