ಜಗಳೂರು ತಹಶೀಲ್ದಾರ್ ಜಿ.ಸಂತೋಷ್ ಕುಮಾರ್
ಜಗಳೂರು,ಜ.5- ಜಿಲ್ಲಾ ಪಂಚಾಯಿತಿ ಹಾಗೂ ತಾಲ್ಲೂಕು ಪಂಚಾಯಿತಿ ಚುನಾಯಿತ ಸದಸ್ಯರ ಸಂಖ್ಯೆ ಹಾಗೂ ಪ್ರಾದೇಶಿಕ ಚುನಾವಣಾ ಕ್ಷೇತ್ರಗಳ ವ್ಯಾಪ್ತಿಗೆ ಸಂಬಂಧಿಸಿದಂತೆ ಆಕ್ಷೇಪಣೆಗಳಿದ್ದಲ್ಲಿ ಇದೇ ದಿನಾಂಕ 16 ರೊಳಗೆ ಸಲ್ಲಿಸಲು ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗ ತಿಳಿಸಿದೆ ಎಂದು ತಹಶೀಲ್ದಾರ್ ಜಿ.ಸಂತೋಷ್ ಕುಮಾರ್ ಹೇಳಿದರು.
ಪಟ್ಟಣದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
ಆಕ್ಷೇಪಣಾ ಅರ್ಜಿಯನ್ನು ಆನ್ ಲೈನ್ ವೆಬ್ ಸೈಟ್ ವಿಳಾಸ http://rdpr.Karnataka.gov.in./rdc/public/” ಅಥವಾ ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗ, 3 ನೇ ಗೇಟ್, 2 ನೇ ಮಹಡಿ, ಕೊಠಡಿ ಸಂಖ್ಯೆ 222/ಂ ಬಹುಮಹಡಿ ಕಟ್ಟಡ ಅಂಬೇಡ್ಕರ್ ವೀದಿ, ಬೆಂಗಳೂರು-560001 ವಿಳಾಸಕ್ಕೆ ಸಲ್ಲಿಸಬಹುದು ಎಂದರು.
ತಾಲ್ಲೂಕಿನಲ್ಲಿ ಬಸವನಕೋಟೆ, ಗುರುಸಿದ್ದಾಪುರ, ಸೊಕ್ಕೆ, ಹೊಸಕೆರೆ, ಅಣಬೂರು, ಹಿರೇಮಲ್ಲನಹೊಳೆ, ಹನುಮಂತಾಪುರ, ಕೆಚ್ಚೇನಹಳ್ಳಿ, ಪಲ್ಲಾಗಟ್ಟೆ, ಅಸಗೋಡು, ಬಿಳಿಚೋಡು, ದೇವಿಕೆರೆ, ಗುತ್ತಿದುರ್ಗ, ಬಿದರಕೆರೆ, ತೋರಣಗಟ್ಟೆ, ದೊಣ್ಣೆಹಳ್ಳಿ ಸೇರಿದಂತೆ 16 ತಾಲ್ಲೂಕು ಪಂಚಾಯಿತಿ ಕ್ಷೇತ್ರಗಳು, ಸೊಕ್ಕೆ, ಅಣಬೂರು, ಬಿಳಿಚೋಡು, ದೊಣ್ಣೆಹಳ್ಳಿ ಸೇರಿ 4 ಜಿಲ್ಲಾ ಪಂಚಾಯಿತಿ ಕ್ಷೇತ್ರಗಳನ್ನೊಳಗೊಂಡಿದೆ ಎಂದು ಮಾಹಿತಿ ನೀಡಿದರು.
ಮತದಾರರ ಪಟ್ಟಿಗೆ ಹೊಸ ಸೇರ್ಪಡೆಗೆ ಅವಕಾಶ: ವಿಧಾನ ಸಭಾ ಕ್ಷೇತ್ರದ 262 ಬೂತ್ ಗಳಲ್ಲಿ ಒಟ್ಟು 189209 ಮತದಾರರಿದ್ದು, ಗಂಡು 95928 ಜನ ಹೆಣ್ಣು 93269 ಜನ, ಇತರೆ 12 ಜನ, ಒಟ್ಟು 189209 ಜನ ಮತದಾರರನ್ನೊಳಗೊಂಡಿದ್ದು.ದಿನಾಂಕ: 9-11-2023ರಿಂದ ದಿನಾಂಕ:5-1-2023 ರವರೆಗೆ ಒಟ್ಟು 3476 ಮತದಾರರು ಹೊಸ ಸೇರ್ಪಡೆಗೊಂಡಿವೆ. ಉಳಿದ ಅರ್ಹರು ಅರ್ಜಿ ಸಲ್ಲಿಸಿ ಮತದಾರರ ಪಟ್ಟಿಗೆ ಹೊಸ ಸೇರ್ಪಡೆ ಹಾಗೂ ಪರಿಷ್ಕರಣೆಗೆ ಅವಕಾಶವಿದೆ. ಕ್ಷೇತ್ರದ ಜನರು ಸದುಪಯೋಗಪಡೆದುಕೊಳ್ಳಬೇಕು ಎಂದರು.
ಕ್ಷೇತ್ರದಲ್ಲಿ ವಿಶೇಷ ವಿಕಲಚೇತನರು ಒಟ್ಟು 2329 ಮತದಾರರಿದ್ದು. ಚುನಾವಣೆ ಸಂದರ್ಭದಲ್ಲಿ ಮತದಾನಕ್ಕೆ ವಾಹನ ಇತರೆ ಸೌಲಭ್ಯ ಕಲ್ಪಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ಲೋಕ್ಯಾನಾಯ್ಕ, ಶಿರಸ್ತೇದಾರ್ ಚಂದ್ರಪ್ಪ ಉಪಸ್ಥಿತರಿದ್ದರು.