ಶ್ರೀ ಸಿದ್ಧರಾಮೇಶ್ವರ ದೇವರ 61ನೇ ರಥೋತ್ಸವ ಹಾಗೂ ಲಿಂ. ಸಿದ್ಧರಾಮೇಶ್ವರ ಮಹಾಸ್ವಾಮಿಗಳ 21ನೇ ಸ್ಮರಣೋತ್ಸವದ ಅಂಗವಾಗಿ ನಗರದ ವೆಂಕಾಭೋವಿ ಕಾಲೋನಿಯ ಶ್ರೀ ಸಿದ್ಧರಾಮೇಶ್ವರ ದೇವಸ್ಥಾನದಿಂದ ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ನೇತೃತ್ವದಲ್ಲಿ ನಡೆದ ಶ್ರೀ ಸಿದ್ಧರಾಮೇಶ್ವರ ದೇವರ ಭಾವಚಿತ್ರದ ಮೆರವಣಿಗೆಗೆ ಕಲಾ ತಂಡಗಳು ಮೆರುಗು ನೀಡಿದವು.
ಚಂಡೆ, ಡೊಳ್ಳು ಕುಣಿತ, ಯಕ್ಷಗಾನ, ಜಗ್ಗಲಿಗೆ, ದೊಡ್ಡಗೊಂಬೆ ಕುಣಿತ ಸೇರಿದಂತೆ 24 ಕಲಾ ತಂಡಗಳು ಮೆರಗು ನೀಡಿದ್ದವು. ಮೆರವಣಿಗೆ ಮಾರ್ಗಮಧ್ಯೆ ಶಾಸಕ ಡಾ.ಶಾಮನೂರು ಶಿವಶಂಕರಪ್ಪ, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಶ್ರೀ ಸಿದ್ಧರಾಮೇಶ್ವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.
ಮೆರವಣಿಗೆಯು ಮಾಗಾನಹಳ್ಳಿ ರಸ್ತೆ, ಕೆ.ಆರ್. ಮಾರುಕಟ್ಟೆ ರಸ್ತೆ, ಎಕ್ಸ್ ಮುನ್ಸಿಪಲ್ ಕಾಲೇಜು, ಮಂಡಿಪೇಟೆ, ಗಡಿಯಾರ ಕಂಬ, ವಿಜಯಲಕ್ಷ್ಮಿ ರಸ್ತೆ, ಚೌಕಿಪೇಟೆ, ಹಾಸಬಾವಿ ವೃತ್ತದ ಮಾರ್ಗವಾಗಿ ಕೆ.ಆರ್. ರಸ್ತೆಯ ಮೂಲಕ ಮತ್ತೆ ದೇವಾಲಯವನ್ನು ಸೇರಿ ಮುಕ್ತಾಯವಾಯಿತು.