ಸತತ 8 ತಾಸು ಗುಣಮಟ್ಟದ ವಿದ್ಯುತ್‌ಗೆ ರೈತ ಸಂಘ ಆಗ್ರಹ

ದಾವಣಗೆರೆ, ಆ.17- ಹಗಲಿನಲ್ಲಿ ಸತತ 8 ತಾಸು ಗುಣಮಟ್ಟದ ವಿದ್ಯುತ್ ನೀಡುವಂತೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ  ಪದಾಧಿಕಾರಿಗಳು ಆನಗೋಡು ಬೆಸ್ಕಾಂ  ಅಧಿಕಾರಿಗೆ ಮನವಿ ಸಲ್ಲಿಸಿ  ಒತ್ತಾಯಿಸಿದ್ದಾರೆ.

ತಾಲ್ಲೂಕಿನ ಎಲ್ಲ ಹಳ್ಳಿಗಳಲ್ಲಿ  ರೈತರಿಗೆ ಕಳಪೆ  ವಿದ್ಯುತ್  ಸರಬರಾಜಿನಿಂದಾಗಿ ತುಂಬಾ ತೊಂದರೆ ಆಗುತ್ತಿದೆ. ರಾತ್ರಿ ವೇಳೆಯಲ್ಲಿ ವಿಷಜಂತು, ಕರಡಿ, ಚಿರತೆ ಮತ್ತು ಹಂದಿಗಳ ಕಾಟವಿರುವುದರಿಂದ  ಅನೇಕ ರೈತರು ಮೃತಪಟ್ಟಿರುತ್ತಾರೆ. ಅಲ್ಲದೇ ನಿರಂತರ ವಿದ್ಯುತ್  ತೊಂದರೆಯಿಂದ  ರಾತ್ರಿ ವೇಳೆ ವಿದ್ಯಾರ್ಥಿಗಳ ಓದಿಗೂ ತೊಂದರೆ ಆಗಿದೆ. ಗ್ರಹಜ್ಯೋತಿ ಯೋಜನೆ ಅಡಿಯಲ್ಲಿ ನಿರಂತರ ವಿದ್ಯುತ್ ಪೂರೈಸುವಂತೆ ಸರ್ಕಾರ ಆದೇಶ ಹೊರಡಿಸಿದ್ದರೂ ಬೆಸ್ಕಾಂ ಅಧಿಕಾರಿಗಳು ನಿರ್ಲಕ್ಷ್ಯ ತೋರುತ್ತಿದ್ದಾರೆ.

2014-15ನೇ ಸಾಲಿನಲ್ಲಿ ಅಕ್ರಮ-ಸಕ್ರಮ ಮಾಡಿಕೊಂಡಿ ರುವ ರೈತರಿಗೆ ಟಿಸಿ ಒದಗಿಸಬೇಕು. ಲೈನ್‌ಮ್ಯಾನ್‌ಗಳು ವಿದ್ಯುತ್ ಲೈನ್ ಮೇಲೆ ಇರುವ ಮರದ ಕೊಂಬೆಗಳನ್ನು ತೆರವುಗೊಳಿಸಬೇಕು ಎಂದು ಒತ್ತಾಯಿಸಲಾಯಿತು. ಈ ಸಂದರ್ಭದಲ್ಲಿ ಗುಮ್ಮನೂರು ಬಸವರಾಜ, ಹುಚ್ಚವ್ವನಹಳ್ಳಿ ಸಿದ್ದಣ್ಣ, ನೀರ್ಥಡಿ ತಿಪ್ಪೇಶ, ತುಂಬಿಗೆರೆ ನಾಗಣ್ಣ, ಕೆಂಚಮ್ಮನಹಳ್ಳಿ ಹನುಮಂತಪ್ಪ, ನೀರ್ಥಡಿ ಭೀಮಣ್ಣ, ಎಂ.ರಮೇಶ್, ಕೋಲ್ಕುಂಟೆ ಹುಚ್ಚೆಂಗಪ್ಪ ಮತ್ತಿತರರಿದ್ದರು.

error: Content is protected !!