ನಗರದಲ್ಲಿ ಇಂದು ಜಿಲ್ಲಾ ಶಿವಸಿಂಪಿ ಸಮಾವೇಶ, ಶಿವದಾಸಿಮಯ್ಯ ಜಯಂತಿ

ನಗರದಲ್ಲಿ ಇಂದು  ಜಿಲ್ಲಾ ಶಿವಸಿಂಪಿ ಸಮಾವೇಶ, ಶಿವದಾಸಿಮಯ್ಯ ಜಯಂತಿ

ದಾವಣಗೆರೆ, ಆ. 12-ಜಿಲ್ಲಾ ಶಿವಸಿಂಪಿ ಸಮಾವೇಶ, ಕುಲಗುರು ಶ್ರೀ ಶಿವದಾಸಿಮಯ್ಯ ಜಯಂತ್ಯುತ್ಸವ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭವು ನಾಳೆ ದಿನಾಂಕ 13 ರ ಭಾನುವಾರ ಬೆಳಿಗ್ಗೆ 11 ಗಂಟೆಗೆ ಆವರಗೆರೆ ಸಮೀಪದ ಶಂಕರಲೀಲಾ ಕನ್ವೆನ್ಷನ್ ಹಾಲ್‌ನಲ್ಲಿ ಹಮ್ಮಿಕೊಂಡಿರುವುದಾಗಿ ಸುದ್ದಿಗೋಷ್ಠಿಯಲ್ಲಿ ಸಮಾಜದ ಬೂಸ್ನೂರು ಗುರುಬಸಪ್ಪ ಮಾಹಿತಿ ನೀಡಿದರು.

ತುಮಕೂರು ಸಿದ್ಧಗಂಗಾ ಮಠದ ಪೀಠಾಧ್ಯಕ್ಷರಾದ ಶ್ರೀ ಸಿದ್ಧಲಿಂಗ ಸ್ವಾಮೀಜಿ ಕಾರ್ಯಕ್ರಮಕ್ಕೆ ಚಾಲನೆ ನೀಡುವರು. ಮುರುಘಾ ಮಠದ ಶ್ರೀ ಬಸವಪ್ರಭು ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದು, ವಿಶೇಷ ಆಹ್ವಾನಿತರಾಗಿ ಚಿತ್ರನಟ ದೊಡ್ಡಣ್ಣ ಆಗಮಿಸಲಿದ್ದಾರೆ.

ಮುಖ್ಯಅತಿಥಿಗಳಾಗಿ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್, ಸಮಾಜದ ಗೌರವಾಧ್ಯಕ್ಷ ಸಿ.ಎಲ್. ಚಂದ್ರಧರ, ತುಮಕೂರು ವಿವಿಯ ಇತಿಹಾಸ ಮತ್ತು ಪುರಾತತ್ವ ಅಧ್ಯಯನ ವಿಭಾಗದ ಪ್ರಾಧ್ಯಾಪಕ ಡಾ. ಡಿ.ಎಂ. ಕೊಟ್ರೇಶ್ ಮತ್ತಿತರರು ಭಾಗವಹಿಸಲಿದ್ದಾರೆ.

2022 ಮತ್ತು 2023 ರ ಸಾಲಿನ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ಪರೀಕ್ಷೆಗಳಲ್ಲಿ ಶೇ. 75 ಕ್ಕೂ ಹೆಚ್ಚು ಅಂಕಗಳನ್ನು ಪಡೆದ ಶಿವಸಿಂಪಿ ಸಮಾಜದ ಎಸ್ಸೆಸ್ಸೆಲ್ಸಿ 46 ಮತ್ತು ಪಿಯುಸಿಯ 51 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಗುತ್ತಿದೆ ಎಂದು ತಿಳಿಸಿದರು. ಕಡಿಮೆ ಜನ ಸಂಖ್ಯೆ ಹೊಂದಿರುವ ಶಿವಸಿಂಪಿ ಸಮಾಜ ಇದೀಗ ಜಾಗೃತವಾಗುತ್ತಿದ್ದು, ಹಲವು ದಶಕಗಳಿಂದ ಹೋರಾಟ ನಡೆಸುತ್ತಾ ಬಂದಿದ್ದರೂ ಸಹ ಸರ್ಕಾರದಿಂದ ಯಾವುದೇ ಸೌಲಭ್ಯಗಳನ್ನು ಪಡೆಯಲು ಸಾಧ್ಯವಾಗಿಲ್ಲ. ಸಂಘಟಿತರಾಗುವ ಅನಿವಾರ್ಯತೆ ಎದುರಾಗಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಸಮಾಜದ ಮುಖಂಡರಾದ ಬೂಸ್ನೂರು ಪ್ರಕಾಶ್, ಹೆಚ್.ಕೆ. ಹೇಮಣ್ಣ, ಜಗದೀಶಪ್ಪ ಬಾವಿಕಟ್ಟಿ, ಬಿ.ಎಂ. ಶಿವಕುಮಾರ್, ಜ್ಞಾನೇಶ್ವರ ಜವಳಿ ಉಪಸ್ಥಿತರಿದ್ದರು.

error: Content is protected !!