ಗ್ಯಾರಂಟಿ ಅನುಷ್ಠಾನ ಸಹಿಸದೇ ಬಿಜೆಪಿ ಆರೋಪ

ಗ್ಯಾರಂಟಿ ಅನುಷ್ಠಾನ ಸಹಿಸದೇ ಬಿಜೆಪಿ ಆರೋಪ

ಕಿಡಿ ಕಾರಿದ ಹರಿಹರದ ಮಾಜಿ ಶಾಸಕ ಎಸ್. ರಾಮಪ್ಪ

ಹರಿಹರ, ಅ. 11 – ರಾಜ್ಯದ ಜನರನ್ನು ಆರ್ಥಿಕವಾಗಿ ಸಬಲರನ್ನಾಗಿ ಮಾಡಲು ಕಾಂಗ್ರೆಸ್ ಐದು ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿರುವುದನ್ನು ಸಹಿಸದೇ ಬಿಜೆಪಿ ಸಲ್ಲದ ಆರೋಪ ಮಾಡುತ್ತಿದೆ ಎಂದು ಮಾಜಿ ಶಾಸಕ ಎಸ್. ರಾಮಪ್ಪ ಹೇಳಿದ್ದಾರೆ.

ನಗರದ ಕಾಂಗ್ರೆಸ್ ಪಕ್ಷದ ಕಚೇರಿಯ ಆವರಣದಲ್ಲಿ ಐ.ಎನ್. ಬಿ.ಸಿ. ಡಬ್ಲ್ಯೂ.ಎಫ್. ಪದಾಧಿಕಾರಿಗಳ ಆದೇಶ ಪತ್ರ ವಿತರಣೆ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಹಿಂದೆ ಬಿಜೆಪಿ ಪಕ್ಷದ ಆಡಳಿತದ ಕಾಲದಲ್ಲಿ ಕಾರ್ಮಿಕರ ನಿಧಿಯನ್ನು ಬೇರೆ ಉದ್ದೇಶಕ್ಕೆ ಬಳಕೆ ಮಾಡಿಕೊಳ್ಳಲಾಗಿತ್ತು. ಆ ನಿಧಿಯಿಂದ ತಾಲ್ಲೂಕಿನಲ್ಲಿ ಬಡ ಕಾರ್ಮಿಕರಿಗೆ ಕನಿಷ್ಠ 100 ಮನೆಗಳನ್ನು ನಿರ್ಮಿಸಲು ಅವಕಾಶವಿತ್ತು ಎಂದು ರಾಮಪ್ಪ ಹೇಳಿದರು.

ಇಂದು ಅಧಿಕಾರ ಸ್ವೀಕರಿಸಿದವರು ಗ್ರಾಮೀಣ ಪ್ರದೇಶಗಳಲ್ಲಿ ಸಭೆಯನ್ನು ಆಯೋ ಜಿಸುವ ಮೂಲಕ ಕಾರ್ಮಿಕ ಕುಟುಂಬಗಳಿಗೆ ಸರ್ಕಾರದ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಜನರಿಗೆ ಉತ್ತಮ ಸೇವೆಯನ್ನು ಒದಗಿಸಲು ಮುಂದಾಗುವಂತೆ ಹೇಳಿದರು. 

ಕೆಪಿಸಿಸಿ ಸದಸ್ಯ ಬಿ. ರೇವಣಸಿದ್ದಪ್ಪ ಮಾತನಾಡಿ, ರಾಜ್ಯದಲ್ಲಿ 12 ಸಾವಿರ ಕೋಟಿ ರೂ.ಗಳ ಕಾರ್ಮಿಕ ನಿಧಿ ಸಂಗ್ರಹಿಸಲಾಗಿತ್ತು. ಆದರೆ, ಆ ಹಣ ಸದ್ಬಳಕೆಯಾಗುತ್ತಿಲ್ಲ. ಪ್ರಸಕ್ತ 3 ಸಾವಿರ ಕೋಟಿ ರೂ. ಉಳಿದಿದೆ. ಅದನ್ನಾ ದರೂ ಬಡ ಕಾರ್ಮಿಕರ ಕುಟುಂಬದ ಸದಸ್ಯರ ಸೌಲಭ್ಯಕ್ಕೆ ಒದಗಿಸಬೇಕಿದೆ ಎಂದರು.

ಈ ಸಂದರ್ಭದಲ್ಲಿ  ಐ.ಎನ್.ಬಿ.ಸಿ. ಡಬ್ಲ್ಯು.ಎಫ್. ರಾಜ್ಯ ಅಧ್ಯಕ್ಷ ಜೆ.ಬಿ. ದಿನೇಶ್, ಉಪಾಧ್ಯಕ್ಷರಾದ ರಾಮ ಆಂಜನೇಯ, ಮುನಿರಾಜ್, ರಾಜ್ಯ ಮಹಿಳಾ ಕಾರ್ಯದರ್ಶಿಗಳಾದ ನಳಿನ, ಯಶೋಧಮ್ಮ, ತಾಲ್ಲೂಕು ಅಧ್ಯಕ್ಷ ಹಾಲೇಶ ಕಮಲಾಪುರ, ಭಾಗ್ಯಮ್ಮ, ಪಿ. ನಾಗಮ್ಮ, ಮಾಲಾ, ಜಮೀಲಾ ಬಿ,  ಹನುಮಂತಪ್ಪ ಹನಗವಾಡಿ, ಬೀರಪ್ಪ, ರಾಮಣ್ಣ, ಉಮೇಶ್ ನಾಯ್ಕ್, ಗೌಸ್ ಪೀರ್, ಪ್ರಕಾಶ್ ಜೆ.ಪಿ. ಇತರರು ಹಾಜರಿದ್ದರು.

error: Content is protected !!