ಬಿಜೆಪಿ ಭ್ರಷ್ಟರಿಗೆ ಜೈಲು ಗ್ಯಾರಂಟಿ

ದಿನೇಶ್ ಕೆ. ಶೆಟ್ಟಿ

ದಾವಣಗೆರೆ, ಆ. 11- ಜಿಲ್ಲೆಯಾದ್ಯಂತ ಬಿಜೆಪಿ ಅವಧಿಯಲ್ಲಿ ನಡೆದ ವ್ಯಾಪಕ ಭ್ರಷ್ಟಾಚಾರದ ಬಗ್ಗೆ ಸಮಗ್ರ ತನಿಖೆ ನಡೆಸಲಾಗುವುದು. ಭ್ರಷ್ಟಾಚಾರದಲ್ಲಿ  ಭಾಗಿಯಾದವರೆಲ್ಲಾ ಜೈಲಿಗೆ ಹೋಗಲು ಸಿದ್ದರಾಗಿರಿ ಎಂದು ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ. ಶೆಟ್ಟಿ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿಯ ಆಡಳಿತ ಅವಧಿಯಲ್ಲಿ ಜಿಲ್ಲೆಯ ಪ್ರತಿ ಇಲಾಖೆಯಲ್ಲೂ ಭ್ರಷ್ಟಾಚಾರ ನಡೆದಿರುವ ದೂರುಗಳು ಕೇಳಿಬರುತ್ತಿವೆ. ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರು ತನಿಖೆಗೆ ಸೂಚನೆ ನೀಡಿದ್ದು, ತನಿಖೆಯ ವರದಿ ಬಂದ ತಕ್ಷಣವೇ ಭ್ರಷ್ಚಾಚಾರದಲ್ಲಿ ಭಾಗಿಯಾಗಿದ್ದ ಸಂಸದರು, ಆಗಿನ ಶಾಸಕರು ಜೈಲಿಗೆ ಹೋಗುವುದು ಗ್ಯಾರಂಟಿ ಎಂದರು.

ಜಿಲ್ಲೆಯಲ್ಲಿನ ಭ್ರಷ್ಟಾಚಾರವನ್ನು ಮುಚ್ಚಿ ಹಾಕಲು ಬಿಜೆಪಿ ತಂತ್ರಗಳನ್ನು ರೂಪಿಸುತ್ತಿದೆ. ಯಾವುದೇ ತಂತ್ರಗಳಿಗೆ ಮಣೆ ಹಾಕುವುದಿಲ್ಲ. 

ಭ್ರಷ್ಟರಿಗೆ ತಕ್ಕ ಶಿಕ್ಷೆ ಆಗಲಿದೆ. ಭ್ರಷ್ಟಾಚಾರ ನಡೆಸುವವರ ಕೈಗೊಂಬೆ ಆಗಿರುವ ಹರಿಹರ ಶಾಸಕ ಬಿ.ಪಿ. ಹರೀಶ್ ಅವರು ಹರಿಹರದಲ್ಲಿ ನಮ್ಮ ಪಕ್ಷದ ಶಾಸಕರಿದ್ದರೂ ಅಭಿವೃದ್ಧಿಗೆ ತಡೆ ಉಂಟು ಮಾಡಿದ್ದರು. ಕೆಲವು ಭ್ರಷ್ಟ ಅಧಿಕಾರಿಗಳ ಜೊತೆಗೂಡಿ ಭ್ರಷ್ಟಾಚಾರ ನಡೆಸಿರುವುದು ನಮ್ಮ ಗಮನಕ್ಕೆ ಬಂದಿದೆ. ಈ ಬಗ್ಗೆಯೂ ಸ್ವಯಂ ತನಿಖೆಗೆ ಹರೀಶ್ ಮುಂದಾಗಲಿ ಎಂದು ಎಚ್ಚರಿಸಿದರು.

ಇತ್ತೀಚಿನ ಸರ್ಕಾರಿ ಕಾರ್ಯಕ್ರಮವೊಂದರಲ್ಲಿ ಹರೀಶ್ ಮಾತಿಗೆ ಎಲ್ಲರೂ ಬೇಸರ ವ್ಯಕ್ತಪಡಿಸಿದ್ದಾರೆ. ಕೆಲವು ಸಾರ್ವಜನಿಕರೂ ಸಹ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಾಮಾನ್ಯ. 

ಪ್ರಜಾಪ್ರಭುತ್ವ, ಸಂವಿಧಾನದ ಬಗ್ಗೆ ಗೌರವ
ಇದ್ದರೆ ಬಿಜೆಪಿಗರು ಅದನ್ನು ಸ್ಪರ್ಧಾತ್ಮಕವಾಗಿ ಪರಿಗಣಿಸಬೇಕಿತ್ತು. ಆದರೆ ಬಿಜೆಪಿಗರು ಸಂವಿಧಾನ ವಿರೋಧಿಗಳಂತೆ ವರ್ತಿಸುತ್ತಿರುವುದರಿಂದ ಸಾರ್ವಜನಿಕರ ಆಕ್ಷೇಪಗಳನ್ನು  ಸ್ವೀಕರಿಸದೇ ಆರೋಪ ಮಾಡುತ್ತಿದ್ದಾರೆಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಕೆ.ಜಿ. ಶಿವಕುಮಾರ್, ಅನಿತಾಬಾಯಿ ಮಾಲತೇಶ್ ರಾವ್, ಅಯೂಬ್ ಪೈಲ್ವಾನ್,  ಹರೀಶ್ ಬಸಾಪುರ, ರಾಜೇಶ್ವರಿ, ಶುಭಮಂಗಳ ಮತ್ತಿತರರಿದ್ದರು.

error: Content is protected !!