ಜಿಲ್ಲೆಯ 363 ಕಡೆ ಗೃಹಲಕ್ಷ್ಮಿ ಯೋಜನೆ ಉದ್ಘಾಟನಾ ಕಾರ್ಯಕ್ರಮ

ಜಿಲ್ಲೆಯಲ್ಲಿ 3.15 ಲಕ್ಷ ನೋಂದಣಿ, ಇನ್ನೂ 69 ಸಾವಿರ ನೋಂದಣಿ ಬಾಕಿ

ದಾವಣಗೆರೆ, ಆ. 10 – ಬರುವ ಆಗಸ್ಟ್ 27ರಂದು ಗೃಹಲಕ್ಷ್ಮಿ ಯೋಜನೆಯ ಉದ್ಘಾಟನೆಯಾಗಲಿದ್ದು, ಜಿಲ್ಲೆಯ 363 ಕಡೆಗಳಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಲು ನಿರ್ಧರಿಸಲಾಗಿದೆ.

ನಗರ ಪ್ರದೇಶದ  169 ಸ್ಥಳಗಳಲ್ಲಿ, ಗ್ರಾಮೀಣ ಪ್ರದೇಶದ ಎಲ್ಲಾ ಪಂಚಾಯತಿಗಳೂ ಸೇರಿದಂತೆ ಒಟ್ಟು 363 ಸ್ಥಳಗಳಲ್ಲಿ ಆ ದಿನ ಕಾರ್ಯಕ್ರಮ ಆಯೋಜಿಸಲಾಗುವುದು. ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರ ನೇತೃತ್ವದಲ್ಲಿ ಜಿಲ್ಲಾ ಮಟ್ಟದಲ್ಲಿ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ.

ಜಿಲ್ಲಾಧಿಕಾರಿ ಎಂ.ವಿ. ವೆಂಕಟೇಶ್ ಅವರು ತಮ್ಮ ಕಚೇರಿಯಲ್ಲಿ ಈ ಕುರಿತು ಸಭೆ ನಡೆಸಿ  ಈ ಕುರಿತು ಸೂಚನೆಗಳನ್ನು ನೀಡಿದ್ದಾರೆ.

ಸಭೆಯಲ್ಲಿ ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುರೇಶ್ ಇಟ್ನಾಳ್, ಅಪರ ಜಿಲ್ಲಾಧಿಕಾರಿ ಪಿ.ಎನ್. ಲೋಕೇಶ್, ಪಾಲಿಕೆ ಆಯುಕ್ತೆ ರೇಣುಕಾ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕಿ ವಾಸಂತಿ ಉಪ್ಪಾರ್ ಮತ್ತಿತರರು ಉಪಸ್ಥಿತರಿದ್ದರು. 

ಪ್ರಸ್ತುತ ಜಿಲ್ಲೆಯಲ್ಲಿ 3 ಲಕ್ಷದ 15 ಸಾವಿರ ಗೃಹಲಕ್ಷ್ಮಿ ಫಲಾನುಭಾವಿಗಳು  ನೋಂದಾಯಿಸಿಕೊಂಡಿದ್ದು, ದಿನಾಂಕ 27-8-23ರ ವರೆಗೆ 3.50 ಲಕ್ಷ ಫಲಾನುಭವಿಗಳ ನೋಂದಣಿಗೆ ಯೋಜಿಸಲಾಗಿದೆ. ಜಿಲ್ಲೆಯಲ್ಲಿ ಶೇ.81.94ರಷ್ಟು ನೋಂದಣಿ ಪೂರ್ಣಗೊಂಡಿದೆ.  ಶೇಕಡಾವಾರು ನೋಂದಣಿಯಲ್ಲಿ ಜಿಲ್ಲೆಯು ರಾಜ್ಯದಲ್ಲಿ 9ನೇ ಸ್ಥಾನದಲ್ಲಿದೆ.

ದಾವಣಗೆರೆ ತಾಲ್ಲೂಕಿನಲ್ಲಿ 1,11,568 ಮನೆಯೊಡತಿಯರು ಈ ಯೋಜನೆಗೆ ನೋಂದಣಿ ಮಾಡಿಸಿಕೊಂಡಿದ್ದಾರೆ. ಚನ್ನಗಿರಿಯಲ್ಲಿ 68,605, ನ್ಯಾಮತಿಯಲ್ಲಿ 19,428, ಜಗಳೂರಿನಲ್ಲಿ 35,624, ಹರಿಹರದಲ್ಲಿ 49,717 ಹಾಗೂ ಹೊನ್ನಾಳಿಯಲ್ಲಿ 29,764 ಮಹಿಳೆಯರು ನೋಂದಣಿ ಮಾಡಿಸಿಕೊಂಡಿದ್ದಾರೆ.

ಜಿಲ್ಲೆಯ ಇನ್ನೂ 69,673 ಮಹಿಳೆಯರು ನೋಂದಣಿ ಮಾಡಿಸಿಕೊಳ್ಳುವುದು ಬಾಕಿ ಇದೆ ಎಂದು ಗುರುತಿಸಲಾಗಿದೆ.

error: Content is protected !!