ಮಲ್ಲಶೆಟ್ಟಿಹಳ್ಳಿ ಕೊಲೆ ಪ್ರಕರಣ : 8 ಕಿ.ಮೀ. ಕ್ರಮಿಸಿ ಆರೋಪಿ ಪತ್ತೆಗೆ ನೆರವಾದ ಶ್ವಾನ ‘ತಾರಾ’

ಮಲ್ಲಶೆಟ್ಟಿಹಳ್ಳಿ ಕೊಲೆ ಪ್ರಕರಣ : 8 ಕಿ.ಮೀ. ಕ್ರಮಿಸಿ ಆರೋಪಿ ಪತ್ತೆಗೆ ನೆರವಾದ ಶ್ವಾನ ‘ತಾರಾ’

ದಾವಣಗೆರೆ, ಆ. 9 – ಮಲ್ಲಶೆಟ್ಟಿಹಳ್ಳಿ ಬಳಿಯ ಎನ್.ಹೆಚ್. -48 ರಸ್ತೆಯ ಸರ್ವೀಸ್ ರಸ್ತೆಯಲ್ಲಿ ನಡೆದ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಶಿವಯೋಗಿ ಎಂಬಾತನನ್ನು ಬಂಧಿಸುವಲ್ಲಿ ತಾರಾ ಎಂಬ ಶ್ವಾನ ನೆರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಶ್ರೀರಾಮನಗರ ನಿವಾಸಿ ನರಸಿಂಹ ಎಂಬುವವ ರನ್ನು ಸರ್ವೀಸ್ ರಸ್ತೆ ಬಳಿ ನಿನ್ನೆ ಹತ್ಯೆ ಮಾಡಲಾಗಿತ್ತು. ಈ ಬಗ್ಗೆ ತನಿಖೆ ನಡೆಸಿದ ಪೊಲೀಸರು ಆರೋಪಿ ಯನ್ನು ಪತ್ತೆ ಮಾಡಿ ಬಂಧಿಸಿದ್ದಾರೆ. ಜಿಲ್ಲಾ ಶ್ವಾನದಳ ವಿಭಾಗದ ‘ತಾರಾ’ ಎಂಬ ಶ್ವಾನವು ಸುಮಾರು 8 ಕಿ.ಮೀ ಕ್ರಮಿಸಿ ಆರೋಪಿತರ ಗುರುತು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದೆ. ಕೊಲೆ ಪ್ರಕರಣದಲ್ಲಿ ಬಂಧಿತ ಶಿವಯೋಗಿ ಸಹ ಶ್ರೀರಾಮನಗರದ ವಾಸಿಯಾಗಿದ್ದು ಮೇಸ್ತ್ರಿ ಆಗಿದ್ದಾನೆ. ಈತನಿಂದ ನರಸಿಂಹ ಕೆಲಸಕ್ಕೆಂದು 35 ಸಾವಿರ ರೂ.ಗಳನ್ನು ಮುಂಗಡವಾಗಿ ಪಡೆದಿದ್ದ. ಕೆಲಸಕ್ಕೂ ಬಾರದೇ, ಹಣ ವಾಪಸ್ ಕೊಡದೇ ಸತಾಯಿಸುತ್ತಿದ್ದ. ಹಣ ಕೇಳಿದ ಶಿವಯೋಗಿ ಮೇಲೆ ಹಲ್ಲೆ ನಡೆಸಿ ಜೈಲಿಗೂ ಹೋಗಿದ್ದ. ಜೈಲಿನಿಂದ ಬಂದ ನಂತರವೂ ಶಿವಯೋಗಿಗೆ ಕಿರುಕುಳ ನೀಡುತ್ತಿದ್ದ. ಈ ದ್ವೇಷದ ಕಾರಣ ಹಾಗೂ ಮುಂದೊಂದು ದಿನ ಕೊಲೆ ಮಾಡಬಹುದು ಎಂಬ ಭಯ ಇತ್ತು ಎಂದು ಶಿವಯೋಗಿ ಹೇಳಿದ್ದಾನೆ.

ಆ.6ರ ರಾತ್ರಿ 10 ಗಂಟೆಗೆ ಎನ್.ಹೆಚ್.-48 ರಸ್ತೆ ಪಕ್ಕದ ಮಲ್ಲಶೆಟ್ಟಿಹಳ್ಳಿ ಬಾಪೂಜಿ ಬಡಾವಣೆ ಸರ್ವೀಸ್ ರಸ್ತೆ ಪಕ್ಕ ಕಟ್ಟಿಗೆ ಕಣಿಗೆಯಿಂದ ನರಸಿಂಹನ ಕಿವಿ, ತಲೆಗೆ ಬಲವಾಗಿ ಹೊಡೆದು ಕೊಲೆ ಮಾಡಿರುವುದಾಗಿ ಪೊಲೀಸರ ಬಳಿ ತಪ್ಪೊಪ್ಪಿಗೆ ನೀಡಿದ್ದಾನೆ. ಆರೋಪಿತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

error: Content is protected !!