ದಾವಣಗೆರೆ, ಆ.8- ನಾಡಿನ ಹೆಸರಾಂತ ಪುಣ್ಯ ಕ್ಷೇತ್ರ ಹಾಗೂ ಶಿಕ್ಷಣ, ದಾಸೋಹ ಸೇವೆಗೆ ಹೆಸರಾದ ಶ್ರೀ ಧರ್ಮಸ್ಥಳ ಕ್ಷೇತ್ರದ ಅಭಿವೃದ್ಧಿ ಮತ್ತು ಪೂಜ್ಯ ಶ್ರೀ ವೀರೇಂದ್ರ ಹೆಗಡೆಯವರ ಸಮಾಜ ಮುಖಿ ಚಿಂತನೆಯ ಕಾರ್ಯಗಳನ್ನು ಸಹಿಸದೇ ಶ್ರೀ ಕ್ಷೇತ್ರದ ಮೇಲೆ ಅನಗತ್ಯ ಅಪಪ್ರಚಾರ ಮಾಡಲಾಗು ತ್ತಿರುವುದನ್ನು ನಗರದ ಶ್ರೀ ಸೋಮೇಶ್ವರ ವಿದ್ಯಾಲಯದ ಸಂಸ್ಥಾಪಕರೂ, ದೂಡಾ ಮಾಜಿ ಅಧ್ಯಕ್ಷರೂ ಆದ ಕೆ.ಎಂ.ಸುರೇಶ್ ಖಂಡಿಸಿದ್ದಾರೆ.
ಈ ರೀತಿಯ ಅಪಪ್ರಚಾರ ಮಾಡುವುದನ್ನು ಬಿಟ್ಟು ಸೌಜನ್ಯಯುತವಾಗಿ ನಡೆದುಕೊಂಡು, ಶ್ರೀ ಕ್ಷೇತ್ರದ ಮತ್ತು ಪೂಜ್ಯ ಧರ್ಮಾಧಿಕಾರಿಗಳ ಸಮಾಜಮುಖಿ ಕಾರ್ಯವನ್ನು ಎಲ್ಲರೂ ಅರ್ಥಮಾಡಿ ಕೊಳ್ಳಬೇಕು. ಸೌಜನ್ಯ ಪ್ರಕರಣದಲ್ಲಿ ಪೂಜ್ಯ ವೀರೇಂದ್ರ ಹೆಗ್ಗಡೆಯವರು ಮುಕ್ತವಾಗಿದ್ದು, ಅವರೇ ತನಿಖೆಗೆ ಒತ್ತಾಯಿಸಿದ್ದಾರೆ. ಹಾಗಾಗಿ ಲಕ್ಷಾಂತರ ಭಕ್ತರು ಭಕ್ತಿಯಿಂದ ನಡೆದುಕೊಳ್ಳುವ ಶ್ರೀ ಕ್ಷೇತ್ರದ ಹೆಸರು ಮತ್ತು ಜನರ ನಂಬಿಕೆಗೆ ಧಕ್ಕೆ ತರುವುದು ಸರಿಯಲ್ಲ. ಈ ರೀತಿಯ ಸಮಾಜದಲ್ಲಿ ಸಾಮರಸ್ಯವನ್ನು ಹಾಳು ಮಾಡುವುದನ್ನು ಶ್ರೀ ಕ್ಷೇತ್ರದ ಭಕ್ತರು ಮತ್ತು ನಾಡಿನ ಜನತೆ ಸಹಿಸುವುದಿಲ್ಲ ಎಂದು ಸುರೇಶ್ ತಿಳಿಸಿದ್ದಾರೆ.