ರಾಜನಹಳ್ಳಿ ರಮೇಶ್ ಬಾಬು ಅವರಿಗೆ `ಸಮಾಜ ಸೇವಾ ವಿಭೂಷಣ’ ಬಿರುದು ಪ್ರದಾನ
ರಂಭಾಪುರಿ ಪೀಠದ ಶ್ರೀಮದ್ ರಂಭಾಪುರಿ ಜಗದ್ಗುರುಗಳವರ 25ನೇ ವರ್ಷದ ಆಷಾಢ ಮಾಸದ ಇಷ್ಟಲಿಂಗ ಮಹಾಪೂಜೆ ಹಾಗೂ ಧರ್ಮೋತ್ತೇಜಕ ಕಾರ್ಯಕ್ರಮ ಇಂದಿನಿಂದ ಇದೇ ದಿನಾಂಕ 13 ರ ವರೆಗೆ 5 ದಿನಗಳ ಕಾಲ ನಗರದ ಶ್ರೀಮದ್ ಅಭಿನವ ರೇಣುಕ ಮಂದಿರದಲ್ಲಿ ಆಯೋಜನೆಗೊಂಡಿದೆ.
ಶ್ರೀ ಮದ್ವೀರಶೈವ ಸದ್ಬೋಧನಾ ಸಂಸ್ಥೆಯ ಜಿಲ್ಲಾ ಘಟಕದ ವತಿಯಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಥೆಯ ಅಧ್ಯಕ್ಷರೂ ಆದ ದಾವಣಗೆರೆ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್ ನಿರ್ದೇಶಕ ದೇವರಮನೆ ಶಿವಕುಮಾರ್, ಶ್ರೀ ಜಗದ್ಗುರು ರೇಣುಕಾ ಸಾಂಸ್ಕೃತಿಕ ಸಂಘದ ಅಧ್ಯಕ್ಷ ದೇವರಮನೆ ಶಿವರಾಜ್ ಅವರುಗಳು ತಿಳಿಸಿದ್ದಾರೆ.
5 ದಿನಗಳ ಕಾಲ ಪ್ರತಿದಿನ ಬೆಳಿಗ್ಗೆ 8 ಗಂಟೆಗೆೆ ಇಷ್ಟ ಲಿಂಗ ಪೂಜೆ ಮತ್ತು ಪ್ರತಿದಿನ ಸಂಜೆ 6.30ಕ್ಕೆ ಧರ್ಮೋ ತ್ತೇಜಕ ಸಮಾರಂಭಗಳು ಏರ್ಪಾಡಾಗಿವೆ. ರಂಭಾ ಪುರಿ ಪೀಠದ ಜಗದ್ಗುರು ಶ್ರೀ ಪ್ರಸನ್ನ ರೇಣುಕ ವೀರ ಸೋಮೇ ಶ್ವರ ರಾಜದೇಶೀ ಕೇಂದ್ರ ಶಿವಾಚಾರ್ಯ ಭಗವತ್ಪಾದರು ಈ ಎಲ್ಲಾ ಕಾರ್ಯಕ್ರಮಗಳ ದಿವ್ಯ ಸಾನ್ನಿಧ್ಯ ವಹಿಸಲಿದ್ದಾರೆ.
ಇಂದು ಸಂಜೆ 6.30ಕ್ಕೆ ಏರ್ಪಾಡಾಗಿರುವ ಧರ್ಮೋತ್ತೇಜಕ ಸಮಾರಂಭದ ನೇತೃತ್ವವನ್ನು ಶ್ರೀ ರೇಣುಕ ಶಿವಾಚಾರ್ಯ ಸ್ವಾಮಿಗಳು, (ಎಡೆಯೂರು ಕ್ಷೇತ್ರ, ಗೌರವಾಧ್ಯಕ್ಷರು, ಅ.ಭಾ.ವೀ.ಶಿ.ಸಂಸ್ಥೆ, ಬೆಂಗಳೂರು). ವಹಿಸುವರು. ಕೊಟ್ಟೂರು ಹಿರೇಮಠದ ಶ್ರೀ ಯೋಗಿ ರಾಜೇಂದ್ರ ಶಿವಾಚಾರ್ಯ ಸ್ವಾಮಿಗಳು ಉಪದೇಶಾಮೃತ ನೀಡುವರು. ಶಾಸಕರೂ ಆದ ಅಖಿಲ ಭಾರತ ವೀರಶೈವ ಮಹಾಸಭಾದ ರಾಷ್ಟ್ರೀಯ ಘಟಕದ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಕಾರ್ಯಕ್ರಮ ಉದ್ಘಾಟಿಸುವರು.
ಇದೇ ಸಂದರ್ಭದಲ್ಲಿ ರಾಧಾಕೃಷ್ಣ ಗುಪ್ತ ಜ್ಯುಯಲರ್ಸ್ನ ಮಾಲೀಕರೂ, ದಾನಿಗಳೂ ಆದ ರಾಜನಹಳ್ಳಿ ರಮೇಶ್ ಬಾಬು ಅವರಿಗೆ `ಸಮಾಜ ಸೇವಾ ವಿಭೂಷಣ’ ಬಿರುದಿನೊಂದಿಗೆ ಗೌರವ ಶ್ರೀರಕ್ಷೆ ನೀಡಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.
ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್, ವಿಧಾನ ಪರಿಷತ್ ಸದಸ್ಯ ಅಬ್ದುಲ್ ಜಬ್ಬಾರ್, ಅಖಿಲ ಭಾರತ ವೀರಶೈವ ಮಹಾಸಭಾದ ರಾಷ್ಟ್ರೀಯ ಘಟಕದ ಉಪಾಧ್ಯಕ್ಷರುಗಳಾದ ಅಥಣಿ ವೀರಣ್ಣ, ಅಣಬೇರು ರಾಜಣ್ಣ, ಕಾರ್ಯದರ್ಶಿ ಹೆಚ್.ಎಂ. ರೇಣುಕಾ ಪ್ರಸನ್ನ ಅವರುಗಳು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.