ಉದ್ಯಾನವನಗಳಿಗೆ ಮೀಸಲಿಟ್ಟ ಜಾಗ ಕಬಳಿಕೆ

ಕಠಿಣ ಕ್ರಮಕ್ಕೆ ಕಾಂಗ್ರೆಸ್ ಒತ್ತಾಯ

ದಾವಣಗೆರೆ, ಆ. 3- ನಗರದ ಉದ್ಯಾನವನಗಳಿಗೆ ಮೀಸಲಿಟ್ಟ ಜಾಗ ಕಬಳಿಕೆಗೆ ಸಂಬಂಧಿಸಿದಂತೆ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಮಹಾನಗರ ಪಾಲಿಕೆ ಸದಸ್ಯ ಎ. ನಾಗರಾಜ್ ಒತ್ತಾಯಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಾಲಿಕೆಯಲ್ಲಿ ಬಿಜೆಪಿ ಆಡಳಿತ ಅವಧಿಯಲ್ಲಿನ ಒಂದೊಂದೇ ಅಕ್ರಮಗಳು ಬಯಲಾಗುತ್ತಿದ್ದು, ಸಾವಿರಾರು ಕೋಟಿ ರೂ.ಮೌಲ್ಯದ ಪಾಲಿಕೆ ವ್ಯಾಪ್ತಿಯ ಜಾಗ, ರಾಜಕಾಲುವೆ, ಉದ್ಯಾನವನಗಳ ಜಾಗ ಕಬಳಿಸಲಾಗಿದೆ. ಅಧಿಕಾರಿಗಳನ್ನು ಬಳಿಸಿಕೊಂಡು ಈ ಹಗರಣಗಳನ್ನು ಮಾಡಲಾಗಿದೆ ಎಂದರು.

ಪಾಲಿಕೆ ವ್ಯಾಪ್ತಿಯ ಎಸ್.ಎಸ್. ಬಡಾವಣೆಯ 23 ನೇ ವಾರ್ಡ್ ಗೆ ಸೇರಿದ ಸಾರ್ವಜನಿಕ ಬಳಕೆಗೆ ಮೀಸಲಾಗಿದ್ದ ಸರ್ಕಾರಿ ಜಾಗವನ್ನು ಕಬಳಿಸಿದ್ದು, ಪಾಲಿಕೆ ಅಧಿಕಾರಿಗಳು, ಸಿಬ್ಬಂದಿ ಸೇರಿ ಮಾರಾಟ ಮಾಡಿರುವುದು ಗೊತ್ತಾಗಿದೆ ಎಂದು ಹೇಳಿದರು.

ಲಕ್ಷ್ಮೀಪ್ಲೋರ್‌ಮಿಲ್ ಬಳಿ ಇರುವ ಪಾಲಿಕೆಯ ವಲಯ-2 ಕ್ಕೆ ಸಂಬಂಧಿಸಿದಂತೆ ಗ್ರಾಮ ಪಂಚಾಯತಿ ಸರ್ವೆ ನಂ. 78/2 ಜಾಗಕ್ಕೆ ಡೋರ್ ನಂಬರ್ ನೀಡಿ 3937/11, 3937/12, 3937/13, 3937/14 ರಲ್ಲಿ ತಲಾ 30×40 ಅಳತೆಯ ಸೈಟ್‌ಗಳನ್ನಾಗಿ ವಿಂಗಡಿಸಿ ನಾಲ್ಕು ಜನರಿಗೆ ನೋಂದಣಿ ಮಾಡಿಕೊಳ್ಳಲು ಪಾಲಿಕೆಯಿಂದಲೇ ಖಾತೆ ಮಾಡಿಕೊಡಲಾಗಿದೆ ಎಂದು ತಿಳಿಸಿದರು.

ಸರ್ಕಾರಿ ಖಾಲಿ ನಿವೇಶನ ಮೀಸಲಿಟ್ಟಿದ್ದು, ಸಾರ್ವಜನಿಕರ ಬಳಕೆಗಾಗಿ ಆಸ್ಪತ್ರೆ, ಪಾರ್ಕ್ ಮತ್ತು ಶಾಲೆ ಸೇರಿದಂತೆ ಜನರಿಗಾಗಿ ಎಸ್ ಎಸ್‌ ಬಡಾವಣೆಯ ಈ ಜಾಗವನ್ನು ಕಾಯ್ದಿರಿಸಲಾಗಿತ್ತು. ಮಧ್ಯವರ್ತಿಗಳು ಹಾಗೂ ಪಾಲಿಕೆ ಸಿಬ್ಬಂದಿ ಸೇರಿ ಆಸ್ತಿ ವಿವರದ ಎಂಎಆರ್-19 , ಕೆಎಂಎಫ್-24  ಆಸ್ತಿ ವಿವರದ ದಾಖಲೆ ಪುಸ್ತಕಗಳಲ್ಲಿ ತಿದ್ದುಪಡಿ ಮಾಡಿ ಕ್ರಯ ಮಾಡಲು ಹಾಗೂ ಮಾರಾಟ ಮಾಡಲು ಅನುಕೂಲ ಮಾಡಿಕೊಟ್ಟಿದ್ದು ಯಾಕೆ? ಈಗಾಗಲೇ ಈ ನಿವೇಶನಗಳಿಗೆ ಡೋರ್ ನಂಬರ್ ಕೊಟ್ಟು ಖಾತೆ ಮಾಡಲಾಗಿದೆ. ಉಪನೋಂದಣಿ ಕಚೇರಿಯಲ್ಲೂ ನೋಂದಣಿ ಆಗಿದೆ ಎಂದು ಮಾಹಿತಿ ನೀಡಿದರು.

 ಆಸ್ತಿ ಕಬಳಿಕೆ ಆರೋಪದ ಮೇಲೆ ತಪ್ಪಿತಸ್ಥರ ವಿರುದ್ಧ ಕ್ರಿಮಿನಲ್ ಮೊಕದ್ಡಮೆ ದಾಖಲಿಸಬೇಕು. ಸರ್ಕಾರಿ ಜಾಗಗಳನ್ನು ಮರಳಿ ಪಡೆಯಬೇಕು. ಇನ್ನೂ ಕೆಲವು ಕಡೆಗಳಲ್ಲಿ ಈ ರೀತಿಯ ಅಕ್ರಮಗಳು ನಡೆದಿದ್ದು, ಮುಂದಿನ ದಿನಗಳಲ್ಲಿ ದಾಖಲೆ ಸಮೇತ ಬಹಿರಂಗ ಪಡಿಸಲಾಗುವುದು ಎಂದರು.

ಖಾಸಗಿ ಬಸ್ ನಿಲ್ದಾಣ, ಅಶೋಕ ರಸ್ತೆಯ ಅಂಡರ್ ಬ್ರಿಡ್ಜ್ ಅವೈಜ್ಞಾನಿಕವಾಗಿ ನಿರ್ಮಾಣವಾಗಿದ್ದು, ಈ ಬಗ್ಗೆ ತನಿಖೆ ನಡೆಸಿದರೆ ಅಕ್ರಮ ಹೊರಬೀಳುತ್ತದೆ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಂಜುನಾಥ್ ಗಡಿಗುಡಾಳ್, ಕೆ. ಚಮನ್ ಸಾಬ್, ನಾಗರಾಜ್ ಪಾಮೇನಹಳ್ಳಿ, ಜಗದೀಶ್, ಉಮೇಶ್, ಉದಯಕುಮಾರ್ ಮತ್ತಿತರರು ಉಪಸ್ಥಿತರಿದ್ದರು. 

error: Content is protected !!