ಬೆಂಗಳೂರು, ಆ.1- ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಇದೇ ದಿನಾಂಕ 7 ರಂದು ಸಂಜೆಯಿಂದ ಅಹೋರಾತ್ರಿ `ಕಾಡುವ ಕಿರಂ’ ಕಾರ್ಯಕ್ರಮವನ್ನು (10ನೇ ವರ್ಷ) ಜನ ಸಂಸ್ಕೃತಿ ಪ್ರತಿಷ್ಠಾನ ಆಯೋಜಿಸಿದೆ.
ಕಾರ್ಯಕ್ರಮದಲ್ಲಿ ನಾಡಿನ ಹಿರಿಯ, ಕಿರಿಯ ಕವಿ, ವಿದ್ವಾಂಸರು, ಚಿಂತಕರು, ಚಿತ್ರ ಕಲಾವಿದರು, ಗಾಯಕರು ಪಾಲ್ಗೊಳ್ಳಲಿದ್ದಾರೆ.
ಕಾರ್ಯಕ್ರಮದಲ್ಲಿ 2023ನೇ ಸಾಲಿನ ಪ್ರೊ. ಕಿರಂ ನಾಗರಾಜ ಪ್ರಶಸ್ತಿಯನ್ನು ಹೆಸರಾಂತ ವಿಚಾರವಾದಿ ಪ್ರೊ.ನರೇಂದ್ರ ನಾಯಕ್, ಹಿರಿಯ ಸಾಹಿತಿ ಮತ್ತು ಪತ್ರಕರ್ತರಾದ ಆರ್.ಜಿ.ಹಳ್ಳಿ ನಾಗರಾಜ, ಕವಿ ಸುಬ್ಬು ಹೊಲೆಯಾರ್, ಕಲಾವಿದೆ ನಿರ್ಮಲಾ ಕುಮಾರಿ, ಸಾಹಿತಿ ನಾಗತಿಹಳ್ಳಿ ರಮೇಶ್, ಸಾಹಿತ್ಯ ಪರಿಚಾರಕ ಡಾ. ನಾಗೇಶ್ ದಸೂಡಿ ಇವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ ಎಂದು ಜನ ಸಂಸ್ಕೃತಿ ಪ್ರತಿಷ್ಠಾನದ ಅಧ್ಯಕ್ಷ ಡಾ. ಪ್ರದೀಪ್ ಮಾಲ್ಗುಡಿ ತಿಳಿಸಿದ್ದಾರೆ.
ಸಂಜೆಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಕವಿಗಳಾದ ಎಚ್.ಎಸ್. ಶಿವಪ್ರಕಾಶ್, ಅಗ್ರಹಾರ ಕೃಷ್ಣಮೂರ್ತಿ, ಎಚ್.ಎಲ್. ಪುಷ್ಪಾ, ಎಂ.ಎಸ್. ಮೂರ್ತಿ, ರುದ್ರೇಶ ಅದರಂಗಿ ಮೊದಲಾದವರು ಭಾಗವಹಿಸುತ್ತಾರೆ. ಅಹೋರಾತ್ರಿ ಕಾರ್ಯಕ್ರಮದಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳಿಂದ ಆಗಮಿಸಿದ ಕವಿಗಳು ಕಾವ್ಯ ವಾಚನ ಮಾಡಲಿದ್ದಾರೆ. ಹೆಸರಾಂತ ಗಾಯಕರಿಂದ ಗೀತಗಾಯನ, ಕಲಾವಿದರಿಂದ ಚಿತ್ರ ರಚನೆ ಸಹಾ ನಡೆಯಲಿದೆ ಎಂದು ವ್ಯವಸ್ಥಾಪಕ ಸುರೇಶ ಹೇಳಿದ್ದಾರೆ.