ಹೊನ್ನಾಳಿ, ಆ.1- ಕಳೆದ ಎರಡು ವಾರಗಳಿಂದ ತಾಲ್ಲೂಕಿನಾದ್ಯಂತ ಅಬ್ಬರಿಸಿದ ಮಳೆ ಮೂರು ದಿನಗಳಿಂದ ಬಿಡುವು ನೀಡಿದೆ, ಇದರಿಂದ ಕೃಷಿಗೆ ಹೆಚ್ಚು ಅನುಕೂಲವಾಗಿದೆ. ಇದರಿಂದ ಶೇ 100 ರಷ್ಟು ಮೆಕ್ಕೆಜೋಳ ಬಿತ್ತನೆ ಮಾಡಿದ ರೈತರು ಸತತವಾಗಿ ಸುರಿದ ಮಳೆಯಿಂದ ಶೀತಗೊಂಡ ಮೆಕ್ಕೆಜೋಳ ಬೆಳೆ ಹಳದಿ ಬಣ್ಣಕ್ಕೆ ತಿರುಗಿತ್ತು, ಆದರೆ ಕಳೆದ ನಾಲ್ಕು ದಿನಗಳಿಂದ ಮಳೆಬಿಡುವು ಮಾಡಿದ್ದು ಜೊತೆಗೆ ಬಿಸಿಲು ಬರುತ್ತಿರುವುದರಿಂದ ಹಳದಿ ರೋಗದಿಂದ ಬೆಳೆಗೆ ಹೆಚ್ಚು ಹಾನಿ ಇಲ್ಲ ಎಂದು ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕಿ ಪ್ರತಿಮಾ ತಿಳಿಸಿದ್ದಾರೆ.
19-19-19 ಔಷಧಿಯನ್ನು ಒಂದು ಕ್ಯಾನಿಗೆ 40 ಗ್ರಾಂ ಹಾಗೂ 1305 ಔಷಧಿಯನ್ನು ಒಂದು ಕ್ಯಾನಿಗೆ 40 ಗ್ರಾಂ ಹಾಕಿ ಮೆಕ್ಕೆಜೋಳ ಬೆಳೆಗಳಿಗೆ ಸಿಂಪಡಿಸಿದರೆ ಹಳದಿ ರೋಗ ಬಾಧೆ ಹೋಗುತ್ತದೆ ಜೊತೆಗೆ ಬೆಳೆಯು ಸಮೃದ್ದಿಯಾಗಿ ಬೆಳೆಯುತ್ತದೆ ಎಂದು ತಿಳಿಸಿದರು.
ಈಗಾಗಲೆ ಬಿತ್ತನೆ ಮಾಡಿರುವ ಶೇಂಗಾ, ಹೆಸರು ಹಾಗೂ ಮುಂತಾದ ಬೆಳೆಗಳಿಗೆ ಮಳೆ ತುಂಬಾ ಅನುಕೂಲವಾಗಿದೆ. ಆದರೆ ಅತಿಯಾದ ತೇವಾಂಶದಿಂದ ಹಾಗೂ ಸೂರ್ಯನ ಕಿರಣಗಳು ಎಲೆಗಳಿಗೆ ತಾಗದೆ ಇರುವುದರಿಂದ ಬೆಳೆಗಳು ಹಳದಿ ಬಣ್ಣಕ್ಕೆ ತಿರುಗಿದವೆ. ಈ ಹಿನ್ನೆಲೆಯಲ್ಲಿ ಕೃಷಿ ಇಲಾಖೆ ರೈತರಿಗೆ ಮಾರ್ಗದರ್ಶನ ನೀಡಿ ಹೊಲಗಳಲ್ಲಿ ನಿಂತಿರುವ ನೀರನ್ನು ಹೊರ ಹಾಕಬೇಕು ಎಂದು ರೈತರಲ್ಲಿ ಮನವಿ ಮಾಡಿದರು.
ಬಿತ್ತನೆ : ತಾಲ್ಲೂಕಿನಲ್ಲಿ 22 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮೆಕ್ಕೆಜೋಳ, 300 ಹೆಕ್ಟೇರ್ನಲ್ಲಿ ಜೋಳ, 900 ಹೆೇಕ್ಟೇರ್ ಪ್ರದೇಶದಲ್ಲಿ ತೊಗರಿ, 650 ಹೆಕ್ಟೇರ್ ಪ್ರದೇಶದಲ್ಲಿ ಶೇಂಗಾ, 110 ಹೆಕ್ಟೇರ್ ನಲ್ಲಿ ಹತ್ತಿ, 25 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಕಾರ್ಯ ಮುಗಿದೆ, ಆದರೆ ಹಳದಿ ರೋಗಕ್ಕೆ ಬೆಳೆ ನಾಶವಾಗುವುದೇ ಎಂಬ ಆತಂಕ ರೈತರಲ್ಲಿದೆ.