ಸಂಸದರಿಗೆ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಸವಾಲು
ದಾವಣಗೆರೆ, ಜು. 31 – ಸಂಸದ ಜಿ.ಎಂ. ಸಿದ್ದೇಶ್ವರ ಅವರು ಬಿಜೆಪಿ ಪಕ್ಷದಿಂದ ಹೊರ ಬಂದು ಚುನಾವಣೆಗೆ ನಿಲ್ಲಲಿ. ನಾನೂ ಕಾಂಗ್ರೆಸ್ ಪಕ್ಷ ಬಿಟ್ಟು ಚುನಾವಣೆಗೆ ನಿಲ್ಲುತ್ತೇನೆ. ಪಕ್ಷದಿಂದ ಹೊರ ಬಂದು ಜನರ ಆಶೀರ್ವಾದದ ಮೇಲೆ ಸ್ಪರ್ಧಿಸೋಣ. ಆಗ ಯಾರು ಗೆಲ್ಲುತ್ತಾರೋ ನೋಡೋಣ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಸವಾಲು ಹಾಕಿದ್ದಾರೆ.
ಇಂದಿಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನಾವು ಕೈಗಡ ವ್ಯವಹಾರ ಮಾಡಿದ್ದೇವೆಯೇ ಹೊರತು ಬಡ್ಡಿ ವ್ಯವಹಾರ ಮಾಡಿಲ್ಲ. ಸಿದ್ದೇಶ್ವರ ಅವರೇ ಬಡ್ಡಿ ವ್ಯವಹಾರ ಮಾಡಿ ಹಣ ಗಳಿಸಿರಬಹುದು ಎಂದೂ ಅವರು ಹೇಳಿದರು.
ಹಳೆ ದಾವಣಗೆರೆಯಲ್ಲಿ ಪಾಲಿಕೆ ಸದಸ್ಯರೊಬ್ಬರ ಅಕ್ಕ ಹಾಗೂ ತಂದೆ ಸೇರಿ ಸರ್ಕಾರಿ ಪಾರ್ಕ್ ಅನ್ನು ರಿಜಿಸ್ಟರ್ ಮಾಡಿ ಕೊಟ್ಟಿರುವ ಪ್ರಕರಣ ನಡೆದಿದೆ. ಈ ಬಗ್ಗೆ ತನಿಖೆ ನಡೆಸಲಾಗುವುದು. ಪಾರ್ಕ್ ನೋಂದಣಿ ಮಾಡಿಕೊಟ್ಟಿರುವ ಬಗ್ಗೆ ಸಬ್ ರಿಜಿಸ್ಟ್ರಾರ್ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು ಎಂದೂ ಸಚಿವರು ಹೇಳಿದರು.
ದೂಡಾದ ಸಿ.ಡಿ.ಪಿ. ಯೋಜನೆಯಲ್ಲೂ ನಿಯಮಗಳ ಉಲ್ಲಂಘನೆಯಾಗಿದೆ. ಹರಿಹರ ತಾಲ್ಲೂಕಿನ ಹಲವಾರು ಹಳ್ಳಿಗಳನ್ನು ದೂಡಾ ವ್ಯಾಪ್ತಿಗೆ ತರಲಾಗಿದೆ. ಹರಿಹರ ತಾಲ್ಲೂಕಿಗೆ ಸೇರಿ 35-40 ಎಕರೆ ಜಮೀನನ್ನು ಆಶ್ರಯ ಯೋಜನೆಗೆ ಬಳಸಿಕೊಳ್ಳಲಾಗಿದೆ. ಇದಕ್ಕೆ ದಾವಣಗೆರೆ ನಗರ ಪಾಲಿಕೆಯಿಂದ ನಿಯಮ ಮೀರಿ ಹಣ ನೀಡಲಾಗಿದೆ. ಹರಿಹರ ನಗರಸಭೆಯಿಂದಲೇ ಹಣ ನೀಡಬೇಕಿತ್ತು. ಎಂದು ತಿಳಿಸಿದರು.
ಆಶ್ರಯ ಮನೆ ವಿತರಿಸುವಾಗ ಅವ್ಯವಹಾರ ನಡೆದಿರುವ ದೂರುಗಳು ಬಂದಿವೆ. ಈ ಬಗ್ಗೆಯೂ ತನಿಖೆ ನಡೆಸಲಾಗುವುದು. ಗಣಿಯಲ್ಲಿ ಅವ್ಯವಹಾರ ನಡೆದಿರುವ ಬಗ್ಗೆ ದಾಖಲೆಗಳಿವೆ, ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಅವರ ಅಧಿಕಾರಾವಧಿಯಲ್ಲಿ ಏನಾಗಿದೆ, ನಮ್ಮ ಅಧಿಕಾರಾವಧಿಯಲ್ಲಿ ಏನಾಗಿದೆ ಎಂಬುದರ ಬಗ್ಗೆ ಬಹಿರಂಗ ಚರ್ಚೆಗೆ ಸಿದ್ಧನಿದ್ದೇನೆ ಎಂದೂ ಸಚಿವರು ಸವಾಲು ಹಾಕಿದರು.