ದಾವಣಗೆರೆ, ಜು. 31- ಹರಿಹರ ನಗರದ ರೈಲ್ವೆ ನಿಲ್ದಾಣವನ್ನು ಆಧುನೀ ಕರಣಗೊಳಿಸಿ, ಪ್ರಯಾಣಿಕ ಸ್ನೇಹಿ ರೈಲ್ವೆ ನಿಲ್ದಾಣ ಮಾಡುವಂತೆ ಕಳೆದ ಎರಡು ವರ್ಷಗಳಿಂದ ರೈಲ್ವೆ ಸಚಿವಾಲ ಯಕ್ಕೆ ಮನವಿ ಮಾಡಿ ಒತ್ತಡ ಹೇರಲಾಗಿತ್ತು. ಇದರ ಪರಿಣಾಮವಾಗಿ ರೈಲ್ವೆ ಸಚಿವಾಲಯ ಅಮೃತ್ ಭಾರತ್ ನಿಲ್ದಾಣ ಯೋಜನೆಯಡಿ ಹರಿಹರ ರೈಲ್ವೆ ನಿಲ್ದಾಣವನ್ನು ಆಧುನೀಕರಣ ಗೊಳಿಸಲು ಆಯ್ಕೆ ಮಾಡಿಕೊಂಡು ವಿಸ್ತೃತವಾದ ಮಾಸ್ಟರ್ ಪ್ಲಾನ್ ಸಿದ್ದ ಪಡಿಸಿದೆ. ಈ ಉದ್ದೇಶಕ್ಕೆ ರೈಲ್ವೆ ಇಲಾಖೆ ಅಂದಾಜು ರೂ.23.00 ಕೋಟಿಯನ್ನು ವ್ಯಯಿಸಲು ಉದ್ದೇಶಿಸಿದೆ ಎಂದು ಸಂಸದ ಜಿ.ಎಂ. ಸಿದ್ದೇಶ್ವರ ತಿಳಿಸಿದ್ದಾರೆ.
ಪ್ರತಿಯೊಂದು ರೈಲ್ವೆ ವಿಭಾಗದಲ್ಲಿ 15 ರೈಲ್ವೆ ನಿಲ್ದಾಣಗಳನ್ನು ಮೇಲ್ದರ್ಜೆಗೇರಿಸುವ ಉದ್ದೇಶವನ್ನು ರೈಲ್ವೆ ಇಲಾಖೆ ಹೊಂದಿದ್ದು, ಅದರಲ್ಲಿ ಹರಿಹರ ರೈಲ್ವೆ ನಿಲ್ದಾಣ ಸಹ ಒಂದಾಗಿರುವುದು ವಿಶೇಷವಾಗಿದೆ.
ಪ್ರತಿನಿತ್ಯ ಸರಾಸರಿ 5500 ರಷ್ಟು ಪ್ರಯಾಣಿಕರು ಹರಿಹರ ರೈಲ್ವೆ ನಿಲ್ದಾಣದ ಮೂಲಕ ವಿವಿಧೆಡೆ ಸಂಚರಿ ಸುತ್ತಾರೆ. ಈ ಎಲ್ಲಾ ರೈಲ್ವೆ ಪ್ರಯಾಣಿಕರ ಹಿತದೃಷ್ಟಿಯಿಂದ ಉತ್ತಮ ಸೌಲಭ್ಯಗಳನ್ನು ಒದಗಿಸುವುದು ಯೋಜನೆಯ ಮುಖ್ಯ ಉದ್ದೇಶವಾಗಿದೆ ಎಂದು ಹೇಳಿದ್ದಾರೆ.
ಈ ಯೋಜನೆಯಡಿ ಈಗ ಹಾಲಿ ಇರುವ ರೈಲ್ವೆ ನಿಲ್ದಾಣವನ್ನು ತೆರವುಗೊಳಿಸಿ ರೈಲ್ವೆ ನಿಲ್ದಾಣದ ಸ್ವಲ್ಪ ಮುಂದುಗಡೆ ನೂತನ ನಿಲ್ದಾಣ ನಿರ್ಮಾಣ ಮಾಡುವ ಉದ್ದೇಶ ಹೊಂದಲಾಗಿದೆ, ಇದರಿಂದಾಗಿ ಹಾಲಿ ಇರುವ 5 ಮೀಟರ್ ಅಗಲದ ಫ್ಲಾಟ್‍ಫಾರಂ 15 ಮೀಟರ್‍ಗೆ ವಿಸ್ತರಣೆಯಾಗಲಿದೆ. ಫ್ಲಾಟ್ ಫಾರಂ 1 ನ್ನು 2700 ಮೀಟರ್‍ವರೆಗೆ ಹಾಗೂ ಫ್ಲಾಟ್‍ಫಾರಂ 2 ನ್ನು 4400 ಮೀಟರ್‍ವರೆಗೆ ವಿಸ್ತರಿಸಿ ಮೇಲ್ಗಡೆ ಶೆಲ್ಟರ್ ಒದಗಿಸಲಾಗುವುದು.
ನಿಲ್ದಾಣದಲ್ಲಿ 12 ಮೀಟರ್ ಅಗಲದ ಪಾದಚಾರಿ ಮೇಲುಸೇತುವೆ ನಿರ್ಮಾಣ ಮಾಡಿ ಅತ್ಯಾಧುನಿಕ ಎಸ್ಕಲೇಟರ್‍ಗಳನ್ನು ಒದಗಿಸುವುದು ಯೋಜನೆಯಲ್ಲಿ ಪ್ರಮುಖವಾದದ್ದಾಗಿದೆ. ಸ್ಟೇಷನ್ ಮುಂಭಾಗದಲ್ಲಿ ಸರ್ಕ್ಯುಲೇಟಿಂಗ್ ಏರಿಯಾವನ್ನು ಫೇವರ್‍ಬ್ಲಾಕ್‍ಗಳಿಂದ ಅಭಿವೃದ್ಧಿಪಡಿಸುವುದು. ರೈಲ್ವೆ ನಿಲ್ದಾಣಕ್ಕೆ ಪ್ರತೇಕ ಪ್ರವೇಶ ಮತ್ತು ನಿರ್ಗಮನ ದ್ವಾರಗಳನ್ನು ನಿರ್ಮಾಣ ಮಾಡುವ ಉದ್ದೇಶ ಹೊಂದಲಾಗಿದೆ. ಇದರ ಜೊತೆಗೆ ಫ್ಲಾಟ್‍ಫಾರಂಗಳಲ್ಲಿ ಬುಕ್ಕಿಂಗ್ ಆಫೀಸ್ ಹಾಗೂ ಸಾರ್ವಜನಿಕರಿಗೆ ಹೈಟೆಕ್ ಶೌಚಾಲಯಗಳ ನಿರ್ಮಾಣ, ಟ್ರೈನ್‍ಗಳ ಆಗಮನ ಮತ್ತು ನಿರ್ಗಮನವನ್ನು ಎಲ್.ಇ.ಡಿ. ಸೈನೇಜ್ ಬೋರ್ಡ್‍ಗಳ ಮೂಲಕ ಡಿಸ್ಪ್ಲೇ ಮಾಡುವುದು, ಸಿಸಿ ಟಿವಿಗಳನ್ನು ಅಳವಡಿಸುವುದು ಸೇರಿದಂತೆ, ಹಲವು ಉದ್ದೇಶಗಳನ್ನು ಅಮೃತ್ ಭಾರತ್ ನಿಲ್ದಾಣ ಯೋಜನೆಯಡಿ ಹೊಂದಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಒಟ್ಟಾರೆಯಾಗಿ ಹರಿಹರ ರೈಲ್ವೆ ನಿಲ್ದಾಣದ ಅಭಿವೃದ್ಧಿಗೆ 23 ಕೋಟಿಯಷ್ಟು ಅನುದಾನ ವಿನಿಯೋಗಿಸಲಾಗುತ್ತಿದ್ದು, ಬಹುತೇಕ ಒಂದು ವಾರದೊಳಗೆ ನೂತನ ರೈಲ್ವೆ ನಿಲ್ದಾಣದ ಭೂಮಿ ಪೂಜೆ ನೆರವೇರಿಸಲಾಗುವುದು ಎಂದು ಸಿದ್ದೇಶ್ವರ ತಿಳಿಸಿದ್ದಾರೆ.