ದಾವಣಗೆರೆ, ಆ.1- ಭದ್ರಾ ನೀರಾವರಿ ಸಲಹಾ ಸಮಿತಿ (ಐಸಿಸಿ) ಸಭೆಯು ಭದ್ರಾ ಅಚ್ಚು ಕಟ್ಟು ಪ್ರದೇಶದ ವ್ಯಾಪ್ತಿಯಲ್ಲೇ ಜರುಗಬೇಕು ಎಂದು ಭದ್ರಾ ಯೋಜನಾ ಮಟ್ಟದ ನೀರು ಬಳಕೆದಾರರ ಸಹಕಾರ ಸಂಘಗಳ
ಮಹಾ ಮಂಡಲದ ನಿರ್ದೇಶಕ ತೇಜಸ್ವಿ ವಿ.ಪಟೇಲ್ ಒತ್ತಾಯಿಸಿದ್ದಾರೆ.
ಭದ್ರಾ ಅಚ್ಚು ಕಟ್ಟು ಪ್ರದೇಶದ ವ್ಯಾಪ್ತಿಯಲ್ಲಿ ಭತ್ತ ನಾಟಿಗೆ ಹಲವು ಕಡೆ ಈಗಾಗಲೇ ಬೀಜ ಚೆಲ್ಲಿದ್ದಾರೆ. ಕೆಲವು ಕಡೆ ಜಲಾಶಯದಿಂದ ನೀರು ಹರಿಸುವುದನ್ನು ಕಾಯುತ್ತಿದ್ದಾರೆ. ಪ್ರಸ್ತುತ ಹಂಗಾಮಿಗೆ ನೀರು ಹರಿಸುವ ಕುರಿತು ತೀರ್ಮಾನ ಕೈಗೊಳ್ಳಲು ಬೆಂಗಳೂರಲ್ಲಿ ನೀರಾವರಿ ಸಲಹಾ ಸಮಿತಿ ಸಭೆ ನಡೆಸಲು ಯೋಚಿಸಲಾಗುತ್ತಿದೆ ಎಂಬ ಸುದ್ದಿ ಕೇಳಿ ಬರುತ್ತಿದೆ.
ಅಚ್ಚುಕಟ್ಟು ಪ್ರದೇಶದ ರೈತರ ಹಿತದೃಷ್ಟಿಯಿಂದ ಒಂದು ಹಂಗಾಮಿಗೆ ಶಿವಮೊಗ್ಗದಲ್ಲಿ ಹಾಗೂ ಮತ್ತೊಂದು ಹಂಗಾಮಿನಲ್ಲಿ ದಾವಣಗೆರೆಯಲ್ಲಿ ಐಸಿಸಿ ಸಭೆ ಆಯೋಜಿಸಬೇಕು ಎನ್ನುವ ನಿಯಮ ರೂಪುಗೊಳ್ಳಬೇಕು. ಈ ಬಾರಿ ದಾವಣಗೆರೆಯಲ್ಲಿ ಭದ್ರಾ ನೀರಾವರಿ ಸಲಹಾ ಸಮಿತಿ ಸಭೆ ನಡೆಸಲು ಯೋಚಿಸಬೇಕು ಎಂದು ತೇಜಸ್ವಿ ಪಟೇಲ್ ಅವರು ದಾವಣಗೆರೆ ಹಾಗೂ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವರಿಗೆ ಒತ್ತಾಯಿಸಿದ್ದಾರೆ.