ರಾಣೇಬೆನ್ನೂರು, ಜು. 30- ಈ ತಿಂಗಳ 31 ಕ್ಕೆ ನಿಗದಿಯಾಗಿರುವ ಬೆಳೆ ವಿಮಾ ನೋಂದಣಿ ಅವಧಿಯನ್ನು ವಿಸ್ತರಿಸು ವಂತೆ ಕರ್ನಾಟಕ ರಾಜ್ಯ ರೈತ ಸಂಘದ ಸಂಘಟನಾ ಕಾರ್ಯ ದರ್ಶಿ ರವೀಂದ್ರಗೌಡ ಎಫ್.ಪಾಟೀಲ್ ಒತ್ತಾಯಿಸಿದ್ದಾರೆ.
ಪ್ರಸಕ್ತ ಸಾಲಿನ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಲ್ಲಿ ಬೆಳೆ ವಿಮೆ ನೋಂದಣಿ ಕಾರ್ಯದಲ್ಲಿ ಹೊಸ ಹೊಸ ತಾಂತ್ರಿಕತೆ ಅಳವಡಿಕೆಯಾಗಿರುವುದರಿಂದ ಮತ್ತು ಕೇಂದ್ರ ಸರ್ಕಾರ ಬೆಳೆ ವಿಮೆ ತುಂಬಲು ಅವಧಿ ಘೋಷಣೆ ಮಾಡಿದಾಗಿನಿಂದ ಎಡೆಬಿಡದೆ ನಿರಂತರವಾಗಿ ಮಳೆ ಸುರಿಯುತ್ತಿದ್ದು, ಬೆಳೆ ವಿಮೆ ನೋಂದಣಿಗೆ ಅಗತ್ಯ ದಾಖಲಾತಿ ಪೂರೈಸಲು ರೈತರಿಗೆ ಸಮಯ ಸಾಕಾಗುವುದಿಲ್ಲ.
ರೈತರ ಸಂಕಷ್ಟದ ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಮನ್ ಕಿ ಬಾತ್ ರೈತರ ಹೊಟ್ಟೆ ತುಂಬಿಸುವು ದಿಲ್ಲ ಎಂದು ರೈತರ ಬಗ್ಗೆ ಅಳಲು ತೋಡಿಕೊಂಡಿದ್ದಾರೆ.
ಜುಲೈ 31 ಬೆಳೆ ವಿಮೆ ನೋಂದಣಿ ಮತ್ತು ವಿಮಾ ಕಂತು ಪಾವತಿಗೆ ಸರ್ಕಾರ ಕೊನೆಯ ದಿನಾಂಕ ನಿಗದಿಪಡಿಸಿದ್ದು, ರೈತರಿಗೆ ಆತಂಕವನ್ನುಂಟುಮಾಡಿದೆ. ಇದರಿಂದ ದೇಶದ ಕೋಟ್ಯಾಂತರ ರೈತರಿಗೆ ಅನ್ಯಾಯವಾಗುತ್ತಿದ್ದು, ದೇಶದ ವಿವಿಧೆಡೆ ಮಳೆಯ ಆರ್ಭಟಕ್ಕೆ ಕೃಷಿ ಚಟುವಟಿಕೆಯಲ್ಲಿ ಏರುಪೇರಾಗಿದೆ.
ಮುಂಗಾರು, ಕೈಕೊಟ್ಟಿತೆಂದೇ ಎರಡೆರಡು ಬಾರಿ ಬಿತ್ತನೆ ಮಾಡಿ ಎಡಬಿಡದ ಮಳೆಯಿಂದ ರೈತ ಆರ್ಥಿಕ ತೊಂದರೆ ಸಿಲುಕಿದ್ದಾನೆ. ಈ ಬೆಳೆ ವಿಮೆಯ ಸೌಲಭ್ಯ ಈ ಬಾರಿ ರೈತರಿಗೆ ಸಿಗಬೇಕಾದರೆ ಆಗಸ್ಟ್ 31 ರ ವರೆಗೆ ಅವಧಿ ವಿಸ್ತರಿಸಬೇಕೆಂದು ಅವರು ಮನವಿ ಮಾಡಿದ್ದಾರೆ.