ನಗರದಲ್ಲಿ ನಾಳೆ ಪ್ರಶಸ್ತಿ ಪ್ರದಾನ ಕಾರ್ಯಕ್ರಮ, ಚಲನಚಿತ್ರ ನಿರ್ದೇಶಕ ಟಿ.ಎಸ್. ನಾಗಾಭರಣ ಅವರಿಂದ ಪ್ರಶಸ್ತಿ ಪ್ರದಾನ
ದಾವಣಗೆರೆ, ಜು. 28- ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮೂಲಕ ನೀಡಲಾಗುವ ಶ್ರೀಮತಿ ಗೌರಮ್ಮ ಪಿ. ಮೋತಿ ರಾಮರಾವ್ ಚಾರಿಟಬಲ್ ಟ್ರಸ್ಟ್ ಸ್ಥಾಪಿತ `ಮಹಲಿಂಗರಂಗ’ ಜಿಲ್ಲಾ ಸಾಹಿತ್ಯ ಪ್ರಶಸ್ತಿ ಪ್ರದಾನ ಸಮಾರಂಭವನ್ನು ನಾಡಿದ್ದು ದಿನಾಂಕ 30ರ ಭಾನುವಾರ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ.ವಾಮದೇವಪ್ಪ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿಂದು ಮಾತನಾಡಿದ ಅವರು,2022ನೇ ಸಾಲಿನ ಮಹಲಿಂಗ ರಂಗ ಪ್ರಶಸ್ತಿಗೆ ಸಾಹಿತಿ, ಹಿರಿಯ ಪತ್ರಕರ್ತ ಬಾ.ಮ. ಬಸವರಾಜಯ್ಯ ಹಾಗೂ 2023ನೇ ಸಾಲಿನ ಪ್ರಶಸ್ತಿಗೆ ಸಾಹಿತಿ, ವಿಶ್ರಾಂತ ಉಪನ್ಯಾಸಕ ಕೆ.ಎನ್. ಸ್ವಾಮಿ ಅವರು ಭಾಜನರಾಗಿದ್ದಾರೆ ಎಂದು ಹೇಳಿದರು.
ಕುವೆಂಪು ಕನ್ನಡ ಭವನದಲ್ಲಿ ಮಧ್ಯಾಹ್ನ 3.30ಕ್ಕೆ ನಡೆಯಲಿರುವ ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಉದ್ಘಾಟಿಸಲಿದ್ದಾರೆ. ಚಲನಚಿತ್ರ ನಿರ್ದೇಶಕರೂ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ನಿಕಟಪೂರ್ವ ಅಧ್ಯಕ್ಷರೂ ಆಗಿರುವ ಟಿ.ಎಸ್. ನಾಗಾಭರಣ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.
ಪತ್ರಕರ್ತ ಬಿ.ಎನ್. ಮಲ್ಲೇಶ್ ಅಭಿನಂದನಾ ನುಡಿಗಳನ್ನಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಪ್ರಶಸ್ತಿ ಪ್ರಯೋಜಕರಾದ ಮೋತಿ ಆರ್.ಪರಮೇಶ್ವರರಾವ್ ಆಗಮಿಸಲಿದ್ದಾರೆ. ಜಾನಪದ ತಜ್ಞ ಡಾ.ಎಂ.ಜಿ. ಈಶ್ವರಪ್ಪ, ಜಿಲ್ಲಾ ಕಸಾಪ ನಿಕಟಪೂರ್ವ ಅಧ್ಯಕ್ಷ ಡಾ.ಹೆಚ್.ಎಸ್. ಮಂಜುನಾಥ ಕುರ್ಕಿ, ತಾಲ್ಲೂಕು ಕಸಾಪ ಅಧ್ಯಕ್ಷೆ ಸುಮತಿ ಜಯಪ್ಪ ಉಪಸ್ಥಿತರಿರುವರು.
2002ರಿಂದ ಇಲ್ಲಿಯವರೆಗೆ 18 ಜನರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗಿದ್ದು, ಪ್ರಶಸ್ತಿಯು 15 ಸಾವಿರ ರೂ. ನಗದು ಹಾಗೂ ಸ್ಮರಣಿಕೆಗಳನ್ನೊಳಗೊಂಡಿರುತ್ತದೆ ಎಂದು ವಾಮದೇವಪ್ಪ ಮಾಹಿತಿ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಕಸಾಪ ಗೌರವ ಕಾರ್ಯ ದರ್ಶಿಗಳಾದ ರೇವಣಸಿದ್ದಪ್ಪ ಅಂಗಡಿ, ಬಿ.ದಿಳ್ಳೆಪ್ಪ, ಕಾರ್ಯಕಾರಿಣಿ ಸಮಿತಿ ಸದಸ್ಯರಾದ ಸತ್ಯಭಾಮಾ ಮಂಜುನಾಥ್, ರುದ್ರಾಕ್ಷಿಬಾಯಿ ಉಪಸ್ಥಿತರಿದ್ದರು.