ದಾವಣಗೆರೆ, ಜು. 28- ಕಲಾಕುಂಚ ಸಾಂಸ್ಕೃತಿಕ ಸಂಸ್ಥೆ ವತಿಯಿಂದ ಎಸ್.ಎಸ್.ಎಲ್.ಸಿ. ಪರೀಕ್ಷೆ ಕನ್ನಡ ವಿಷಯದಲ್ಲಿ ಅತೀ ಹೆಚ್ಚು ಅಂಕ ಪಡೆದ ಮಕ್ಕಳಿಗೆ ಪ್ರಶಸ್ತಿ ಪುರಸ್ಕಾರ ಸಮಾರಂಭವನ್ನು ನಾಳೆ ದಿನಾಂಕ 29 ಹಾಗೂ 30ರಂದು ನಗರದ ಶಾಮನೂರು ಶಿವಶಂಕರಪ್ಪ ಪಾರ್ವತಮ್ಮ ಸಮುದಾಯ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಥೆಯ ಸಂಸ್ಥಾಪಕ ಸಾಲಿಗ್ರಾಮ ಗಣೇಶ್ ಶೆಣೈ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕನ್ನಡದಲ್ಲಿ 125ಕ್ಕೆ 120 ರಿಂದ 124 ರವರೆಗೆ ಅಂಕ ಪಡೆದ ಮಕ್ಕಳಿಗೆ `ಕನ್ನಡ ಕುವರ-ಕುವರಿ’ ಜಿಲ್ಲಾ ಪ್ರಶಸ್ತಿ, 125 ಪೂರ್ಣ ಅಂಕ ಪಡೆದ ಮಕ್ಕಳಿಗೆ ರಾಜ್ಯ ಮಟ್ಟದ `ಕನ್ನಡ ಕೌಸ್ತುಭ’ ರಾಜ್ಯ ಪ್ರಶಸ್ತಿ, ಮತ್ತು 625 ಕ್ಕೆ 600 ಕ್ಕೂ
ಹೆಚ್ಚು ಅಂಕ ಪಡೆದ ಮಕ್ಕಳಿಗೆ
ಕರ್ನಾಟಕ ರಾಜ್ಯ ವ್ಯಾಪ್ತಿಯಲ್ಲಿ `ಸರಸ್ವತಿ ಪುರಸ್ಕಾರ’ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದರು.
29ರ ಶನಿವಾರ ಬೆಳಿಗ್ಗೆ 10.30ಕ್ಕೆ ಕರ್ನಾಟಕ ಸುಗಮ ಸಂಗೀತ ಪರಿಷತ್ತಿನ ರಾಜ್ಯಾಧ್ಯಕ್ಷ ವೈ.ಕೆ.ಮುದ್ದುಕೃಷ್ಣ ಸಮಾರಂಭ ಉದ್ಘಾಟಿಸಲಿದ್ದು, ಸಂಸ್ಥೆಯ ಅಧ್ಯಕ್ಷ ಕೆ.ಎಚ್.ಮಂಜುನಾಥ್ ಅಧ್ಯಕ್ಷತೆ ವಹಿಸಿಕೊಳ್ಳಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸಂಗೀತ ನಿರ್ದೇಶಕರಾದ ನಗರ ಶ್ರೀನಿವಾಸ್ ಉಡುಪ, ಸುಗಮ ಸಂಗೀತ ಅಕಾಡೆಮಿಯ ಅಧ್ಯಕ್ಷ ಡಾ. ಕಿಕ್ಕೇರಿ ಕೃಷ್ಣಮೂರ್ತಿ, ಮೋತಿ ಪರಮೇಶ್ವರ ರಾವ್, ಕಲಾಕುಂಚ ಮಹಿಳಾ ವಿಭಾಗದ ಅಧ್ಯಕ್ಷರಾದ ಶ್ರೀಮತಿ ಹೇಮಾ ಶಾಂತಪ್ಪ ಪೂಜಾರಿ ಉಪಸ್ಥಿತರಿರುತ್ತಾರೆ.
ಜು.30 ರಂದು ಭಾನುವಾರ ಬೆಳಿಗ್ಗೆ 10.30ಕ್ಕೆ ಚಲನಚಿತ್ರ ನಟ, ನಿರ್ದೇಶಕ ಟಿ.ಎಸ್.ನಾಗಾಭರಣ ಸಮಾರಂಭ ಉದ್ಘಾಟಿಸಲಿದ್ದು, ಶ್ರೀಮತಿ ಸರಸ್ವತಿ ದಾಸಪ್ಪ ಶೆಣೈ ಪ್ರತಿಷ್ಠಾನದ ಅಧ್ಯಕ್ಷ ಡಾ. ನಾಗೇಶ್ ಸಂಜೀವ ಕಿಣಿ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಬಿ.ವಾಮದೇವಪ್ಪ, ಶ್ರೀ ಸಿದ್ಧಗಂಗಾ ವಿದ್ಯಾಸಂಸ್ಥೆಯ ಮುಖ್ಯಸ್ಥೆ ಶ್ರೀಮತಿ ಜಸ್ಟಿನ್ ಡಿ.ಸೌಜ ಆಗಮಿಸಲಿದ್ದಾರೆ. ಕುಮಾರಿ ಭೂಮಿಕಾ ರಮೇಶ್ ಪೈ, ಕಲಾಕುಂಚ ಮಹಿಳಾ ವಿಭಾಗದ ಗೌರವ ಅಧ್ಯಕ್ಷೆ ಶ್ರೀಮತಿ ವಸಂತಿ ಮಂಜುನಾಥ್ ಗೌರವ ಉಪಸ್ಥಿತರಿರಲಿದ್ದಾರೆ ಎಂದರು.
ದಾವಣಗೆರೆ ಜಿಲ್ಲೆ ಸೇರಿದಂತೆ ನಾಡಿನ ವಿವಿಧ ಜಿಲ್ಲೆಗಳಿಂದ ಸುಮಾರು 965 ವಿದ್ಯಾರ್ಥಿ, ವಿದ್ಯಾರ್ಥಿಗಳು ಪ್ರಶಸ್ತಿ ಪ್ರದಾನಕ್ಕೆ ಆಗಮಿಸಲಿದ್ದು, ಕಳೆದ 33 ವರ್ಷಗಳಿಂದ 36 ಸಾವಿರ ಮಕ್ಕಳಿಗೆ ಪ್ರಶಸ್ತಿ ನೀಡಿ ಗೌರವಿಸಲಾಗಿದೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಸಂಸ್ಥೆಯ ಅಧ್ಯಕ್ಷ ಕೆ. ಹೆಚ್. ಮಂಜುನಾಥ್, ವಸಂತಿ ಮಂಜುನಾಥ್, ಹೇಮಾ ಶಾಂತಪ್ಪ ಪೂಜಾರಿ, ಜ್ಯೋತಿ ಗಣೇಶ್ ಶೆಣೈ, ಮಹದೇವ ಅಸಗೋಡು ಉಪಸ್ಥಿತರಿದ್ದರು.