ದಾವಣಗೆರೆ, ಜು. 24- ಕರ್ನಾಟಕ ರಾಜ್ಯದ ರೈತರ ಜೀವನಾಡಿ ಭದ್ರಾ ಜಲಾಶಯಕ್ಕೆ ಕಳೆದೆರಡು ದಿನಗಳಿಂದ ಒಳ ಹರಿವಿನ ಪ್ರಮಾಣ ಹೆಚ್ಚಾಗುತ್ತಿರುವುದು ಸಂತಸದ ವಿಚಾರವಾಗಿದ್ದು, ಇಂದಿನ ಒಳ ಹರಿವು 39,348 ಕ್ಯೂಸೆಕ್ಸ್, ನೀರಿನ ಮಟ್ಟ 149.5 ಅಡಿ ಇರುತ್ತದೆ. ಆ.1 ರಿಂದ ಭದ್ರಾ ನಾಲೆಗಳಿಗೆ ನೀರು ಹರಿಸುವಂತೆ ಭದ್ರಾ ಕಾಡಾ ಸಮಿತಿಯನ್ನು ಜಿಲ್ಲಾ ರೈತರ ಒಕ್ಕೂಟ ಆಗ್ರಹಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಧ್ಯಕ್ಷ ಬಿ.ಎಂ. ಸತೀಶ್ ಅವರು, ಭದ್ರಾ ಅಚ್ಚುಕಟ್ಟು ಪ್ರದೇಶದ ಜಿಲ್ಲೆಯ ಅರ್ಧದಷ್ಟು ರೈತರು ಬೇರೆ ಮೂಲಗಳ ನೀರು ಬಳಸಿ, ಭತ್ತದ ಸಸಿ ಬೆಳೆಸಿಕೊಂಡಿ ದ್ದಾರೆ. ಇನ್ನುಳಿದ ಅರ್ಧದಷ್ಟು ರೈತರು ಭದ್ರಾ ನೀರು ಹರಿಸಿದ ಮೇಲೆ ಬೀಜ ಚೆಲ್ಲುವವರಿದ್ದಾರೆ. ಇದರಿಂದ ಮುಂಗಡವಾಗಿ ಸಸಿ ಬೆಳೆಸಿಕೊಂಡ ವರಿಗೂ, ತಡವಾಗಿ ಸಸಿ ಬೆಳೆಸಿಕೊಳ್ಳುವವರಿಗೂ ಎರಡು ತಿಂಗಳ ಅವಧಿಯ ಅಂತರವಾಗುತ್ತದೆ ಎಂದರು. ಮುಂದೆ ಭತ್ತದ ಕಟಾವು ಅವಧಿಯಲ್ಲಿ ಎರಡು ತಿಂಗಳು ಹೆಚ್ಚುವರಿಯಾಗಿ ನೀರು ಹರಿಸಬೇಕಾಗುತ್ತದೆ. ಆದ್ದರಿಂದ ಆ.1 ರಿಂದ ನಾಲೆಗಳಿಗೆ ನೀರು ಬಿಡಬೇಕೆಂದು ಒತ್ತಾಯಿಸಿದರು.
ಭದ್ರಾ ಜಲಾಶಯದ ಕಳೆದ 60 ವರ್ಷಗಳ ಇತಿಹಾಸ ಪರಿಶೀಲಿಸಿದಾಗ ಅಕ್ಟೋಬರ್-ನವೆಂಬರ್ ತಿಂಗಳಲ್ಲಿ ಭರ್ತಿಯಾಗಿರುವ ಉದಾ ಹರಣೆಗಳೇ ಹೆಚ್ಚು. ಇದು ಮಳೆಗಾಲವಾಗಿ ರುವುದರಿಂದ ನೀರಿನ ಸಂಗ್ರಹ ನೋಡಿಕೊಂಡು ವೇಳಾಪಟ್ಟಿ ಪ್ರಕಾರ ನೀರು ಹರಿಸಿದರೂ ನಡೆಯುತ್ತದೆ. ಬೇಸಿಗೆಯಲ್ಲಿ ಮಾತ್ರ ನಿರಂತರ ನೀರು ಹರಿಸಬೇಕು. ನೀರಾವರಿ ಇಲಾಖೆ 2 ಹಂಗಾಮಿನಲ್ಲಿಯೂ ನೀರಿನ ನಿರ್ವಹಣೆಯನ್ನು ಸಮರ್ಪಕವಾಗಿ ಮಾಡಬೇಕೆಂದು ತಿಳಿಸಿದರು.
ವಿಶ್ವದಾದ್ಯಂತ ಅಕ್ಕಿ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿದೆ. ಇದರಿಂದ ಮುಂದಿನ ದಿನಗಳಲ್ಲಿ ಅಕ್ಕಿ ಬೆಲೆ ಹೆಚ್ಚಳವಾಗುವ ಸಂಭವವಿದೆ. ಪ್ರಪಂಚದ ಅಕ್ಕಿ ಉತ್ಪಾದನೆಯಲ್ಲಿ ಭಾರತದ ಪಾಲು ಶೇ. 40 ರಷ್ಟು ಇದೆ ಎಂದರು.
2022-23 ನೇ ಸಾಲಿನಲ್ಲಿ ಭಾರತದಿಂದ ವಿದೇಶಗಳಿಗೆ 42.12 ಲಕ್ಷ ಟನ್ ಅಕ್ಕಿ ರಫ್ತು ಆಗಿದೆ. ಈಗ ಕೇಂದ್ರ ಸರ್ಕಾರ ಬಾಸುಮತಿ ಅಕ್ಕಿ ಹೊರತುಪಡಿಸಿ, ಇನ್ನುಳಿದ ಎಲ್ಲಾ ವಿಧದ ಅಕ್ಕಿ ರಫ್ತುನ್ನು ನಿಷೇಧಿಸಿದೆ.
ಯಾವುದೇ ಅಡೆತಡೆ ಇಲ್ಲದೇ ನಿಗದಿತ ದರದಲ್ಲಿ ನಮ್ಮ ದೇಶದ ಜನರಿಗೆ ಅಕ್ಕಿ ಪೂರೈಕೆಯಾಗಬೇಕು ಮತ್ತು ಮೊದಲು ನಮ್ಮ ದೇಶದ ಜನರಿಗೆ ಊಟ, ಆಮೇಲೆ ವ್ಯಾಪಾರ ಎಂಬುದು ಕೇಂದ್ರ ಸರ್ಕಾರದ ಉದ್ದೇಶವಾಗಿದೆ. ಆದರೆ ಇದರಿಂದ ಭತ್ತಕ್ಕೆ ಚಿನ್ನದ ಬೆಲೆ ಸಿಗುವ ಅವಕಾಶ ಕೈ ತಪ್ಪುವ ಸಾಧ್ಯತೆಗಳಿವೆ ಎಂದು ಹೇಳಿದರು.
ಅಕ್ಕಿ ರಫ್ತು ನಿಷೇಧ ಹಿಂಪಡೆದು ಪ್ರಸ್ತುತ ಟೊಮ್ಯಾಟೊಗೆ ಸಿಕ್ಕ ಚಿನ್ನದ ಬೆಲೆ ಭತ್ತಕ್ಕೂ ಸಿಗುವಂತೆ ಮಾಡಬೇಕು. ಅನೇಕ ವರ್ಷಗಳಿಂದ ಬಸವಳಿದು ಭತ್ತ ಬೆಳೆದು ದೇಶದ ಜನರಿಗೆ ಅನ್ನ ನೀಡಿದ ರೈತರಿಗೆ ಸುವರ್ಣಾವಕಾಶ ಸಿಗುವಂತೆ ಮಾಡಬೇಕೆಂದು ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಬೆಳವನೂರು ನಾಗೇಶ್ವರರಾವ್, ಮಳಲಕೆರೆ ಸದಾನಂದ, ಹೊಸಹಳ್ಳಿ ಶಿವಮೂರ್ತಿ, ಹೆಚ್.ಎನ್. ಗುರುನಾಥ, 6 ನೇ ಕಲ್ಲು ವಿಜಯಕುಮಾರ್, ತುರ್ಚಘಟ್ಟದ ಪುಟ್ಟರಾಜ್, ಗೋಣಿವಾಡದ ಪಿ.ಎ. ನಾಗರಾಜಪ್ಪ ಉಪಸ್ಥಿತರಿದ್ದರು.