ಹೊನ್ನಾಳಿ, ಜು.24- ಕಳೆದ ಹಲವಾರು ದಿನಗಳಿಂದ ಮಣಿಪುರದಲ್ಲಿ ನಡೆಯುತ್ತಿರುವ ವ್ಯಾಪಕ ಹಿಂಸಾಚಾರಕ್ಕೆ ಅಲ್ಲಿನ ಕಾಣದ ಕೈಗಳು ಕಾರಣ, ಬಿಜೆಪಿಗೆ ಕೆಟ್ಟ ಹೆಸರು ತರಲು ಕಾಣದ ಕೈಗಳ ಷಡ್ಯಂತ್ರ ನಡೆಯುತ್ತಿದೆ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಹೇಳಿದರು.
ತಾಲ್ಲೂಕಿನ ಹಿರೇಗೋಣಿಗೆರೆ ಗ್ರಾಮದಲ್ಲಿ ಕೇಂದ್ರ ಸರ್ಕಾರದ 9ನೇ ವರ್ಷದ ಸಾಧನೆಯ ಕರಪತ್ರವನ್ನು ವಿತರಿಸಿ, ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಮಣಿಪುರದಲ್ಲಿ ನಡೆಯುತ್ತಿರುವ ಹಿಂಸಾಚಾರಕ್ಕೆ ಕಾರಣ ಯಾರು ಎಂದು ಶೀಘ್ರವೇ ಕೇಂದ್ರ ಹಾಗೂ ಅಲ್ಲಿನ ಬಿಜೆಪಿ ಸರ್ಕಾರ ಬಯಲಿಗೆಳೆಯಲಿದೆ, ಆದರೆ ಅಲ್ಲಿ ನಡೆಯುತ್ತಿರುವ ಹಿಂಸಾಚಾರಕ್ಕೆ ಪ್ರತಿಪಕ್ಷಗಳು ಪ್ರಚೋಧನೆ ನೀಡುತ್ತಿವೆ ಎಂದು ಅವರು ಆರೋಪಿಸಿದರು.
ಮಣಿಪುರದ ಕಾಂಗ್ಪೋಕ್ಸಿ ಜಿಲ್ಲೆಯ ಇಬ್ಬರು ಮಹಿಳೆಯರನ್ನು ಬೆತ್ತಲೆ ಮೆರವಣಿಗೆ ಮಾಡಿ ಲೈಂಗಿಕ ದೌರ್ಜನ್ಯವೆಸಗಿದ ಆರು ಜನ ಆರೋಪಿಗಳನ್ನು ಅಲ್ಲಿನ ಪೊಲೀಸರು ಬಂಧಿಸಿದ್ದಾರೆ, ಈ ಎಲ್ಲಾ ಆರೋಪಿಗಳ ವಿಚಾರಣೆ ನಡೆಯುತ್ತಿದೆ, ಆಗ ಹಿಂಸೆಗೆ ಯಾರು ಕಾರಣ ಎಂದು ಗೊತ್ತಾಗುತ್ತದೆ ಎಂದು ತಿಳಿಸಿದರು. ತಾಲ್ಲೂಕು ಬಿಜೆಪಿ ಅಧ್ಯಕ್ಷ ಜೆ.ಕೆ.ಸುರೇಶ್ ಮಾತನಾಡಿ, ನಾವು ಹಿಂದುತ್ವದ ಜೊತೆ ಜೊತೆಯಲ್ಲೆ ಅಭಿವೃದ್ಧಿಗೂ ಹೆಚ್ಚು ಆಧ್ಯತೆ ನೀಡಿದ್ದರಿಂದಲ್ಲೇ ಮತದಾರರು ಮೂರನೇ ಬಾರಿಗೂ ಕೇಂದ್ರದಲ್ಲಿ ಬಿಜೆಪಿಗೆ ಅವಕಾಶ ಕೊಡಲು ತೀರ್ಮಾನಿಸಿದ್ದಾರೆ ಎಂದರು. ಈ ಸಂದರ್ಭ ಮುಖಂಡರಾದ ಮಂಜುನಾಥ್ ಸಿಂಧೆ, ಬರಮಣ್ಣ, ನರಸಿಂಹ,ರಮೇಶ್, ಸುರೇಶ್,ಲೋಕೇಶ್, ಕೇಶೋಜಿರಾವ್, ಪ್ರಕಾಶ್ ಸೇರಿದಂತೆ ಮತ್ತಿತರರಿದ್ದರು ಇದ್ದರು.