ಉಪ ಸಭಾಪತಿ ಅವಮಾನ ಪ್ರಕರಣ: ಬಂಜಾರ ಸಮುದಾಯದ ಖಂಡನೆ

ಹೊನ್ನಾಳಿ, ಜು. 23- ವಿಧಾನಸಭಾ ಉಪ ಸಭಾಪತಿ ರುದ್ರಪ್ಪ ಎಂ. ಲಮಾಣಿ ಅವರಿಗೆ ಅವಮಾನ ಮಾಡಿದ  ಕೆಲ ಬಿಜೆಪಿಯವರ ಕ್ರಮವನ್ನು ಬಂಜಾರ್ ಸಮುದಾಯ  ಉಗ್ರವಾಗಿ ಖಂಡಿಸುತ್ತದೆ ಎಂದು ಕೆಪಿಸಿಸಿ ಸದಸ್ಯ ಡಾ. ಈಶ್ವರ ನಾಯ್ಕ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಮ್ಮ ಬಂಜಾರ ಸಮುದಾಯ ಹಾಗೂ ರುದ್ರಪ್ಪ ಎಂ. ಲಮಾಣಿ ಅವರು ಅತ್ಯಂತ ತಾಳ್ಮೆ, ಮುಗ್ಧ ಸ್ವಭಾವದ ಸಜ್ಜನ ವ್ಯಕ್ತಿ ಯಾಗಿದ್ದು, ಎಲ್ಲರ ಬಗ್ಗೆಯೂ ಕೂಡ ಅತ್ಯಂತ ಗೌರವಯು ತವಾಗಿ ನಡೆದುಕೊಳ್ಳುವ ಅಪರೂಪದ ವ್ಯಕ್ತಿಯಾಗಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದ ಇವರಿಗೆ  ಇದೀಗ ವಿಧಾನಸಭಾ ಉಪ ಸಭಾಪತಿಯಂತಹ ಉನ್ನತ ಸ್ಥಾನ ಲಭಿಸಿರುವುದನ್ನು ಸಹಿಸದ ಕೆಲ ಬಿಜೆಪಿ ನಾಯಕರುಗಳು  ಉಪಸಭಾಪತಿ ಕಡೆಗೆ  ಕಾಗದ ಚೂರುಗಳನ್ನು ಎಸೆಯುವ  ಮೂಲಕ ಅಪಮಾನ  ಮಾಡಿದ್ದಾರೆ ಎಂದು ದೂರಿದರು.

ಸದನದಲ್ಲಿದ್ದ ಶಿವಲಿಂಗೇಗೌಡ  ಅವರು ಕೂಡ ರುದ್ರಪ್ಪ ಎಂ. ಲಮಾಣಿಯವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಎಂದ ಅವರು,  ಒಂದು ವೇಳೆ ಏನೇ ಅಸಮಾಧಾನಗಳಿದ್ದರೂ ಅದನ್ನು ಖಂಡಿಸಲು ಬೇರೆ ಬೇರೆ ವಿಧಾನಗಳು, ಮಾರ್ಗಗಳಿವೆ. ಅದನ್ನು ಬಿಟ್ಟು ಕಾಗದದ ಚೂರುಗಳನ್ನು ಅವರ ಕಡೆಗೆ ಎಸೆಯುವುದು ಖಂಡನೀಯ. ಇದನ್ನು ಯಾವುದೇ ನಾಗರಿಕ ಸಮಾಜ ಒಪ್ಪುವುದಿಲ್ಲ. ಈ ಕ್ರಮದ ಬಗ್ಗೆ ಇಡೀ ಬಂಜಾರ ಸಮು ದಾಯ ಉಗ್ರವಾಗಿ ಖಂಡಿಸುತ್ತದೆ ಎಂದು ಹೇಳಿದರು.

ಇದರ ಜೊತೆಗೆ ಮಣಿಪುರದಲ್ಲಿ ಮಹಿಳೆಯರನ್ನು ವಿವಸ್ತ್ರಗೊಳಿಸಿ ಮೆರವಣಿಗೆ  ನಡೆಸಿದ  ಘಟನೆಯನ್ನು  ಕೂಡ ಬಂಜಾರ ಸಮುದಾಯ ಖಂಡಿಸುತ್ತದೆ ಎಂದು ಹೇಳಿದರು. 

ಕೂಡಲೇ ಬಿಜೆಪಿ ಮುಖಂಡರು ಉಪಸಭಾಪತಿ ರುದ್ರಪ್ಪ ಲಮಾಣಿಯವರಲ್ಲಿ ಕ್ಷಮೆ ಕೇಳಬೇಕು. ಇಲ್ಲವಾದಲ್ಲಿ  ಬಿಜೆಪಿಯಲ್ಲಿರುವ  ಲಂಬಾಣಿ ಸಮಾಜದವರು ಕೂಡ ರಾಜೀನಾಮೆ ಕೊಟ್ಟು ಹೊರಬರುವಂತೆ ವಿನಂತಿ ಮಾಡಿ ಎಲ್ಲರೂ ಸೇರಿ ಉಗ್ರ ಪ್ರತಿಭಟನೆ ಮಾಡಲು ನಾವು ಹಿಂಜರಿಯುವುದಿಲ್ಲ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಜಿ.ಪಂ.ಮಾಜಿ ಸದಸ್ಯ ಶಿವರಾಂನಾಯ್ಕ, ಗ್ರಾ.ಪಂ. ಮಾಜಿ ಅಧ್ಯಕ್ಷ  ವಿಠಲ್ ನಾಯ್ಕ, ಅಸಂಘಟಿತ  ಕಾರ್ಮಿಕರ ಸಂಘದ   ಅಧ್ಯಕ್ಷ  ಸೇನ್ಯಾನಾಯ್ಕ, ತರಗನಹಳ್ಳಿ ವಿ.ಎಸ್.ಎಸ್.ಎನ್. ಸದಸ್ಯ ಪದ್ಮನಾಯ್ಕ, ವಕೀಲ ರಾಜಶೇಖರ ನಾಯ್ಕ,  ಪರಮೇಶ್ ನಾಯ್ಕ , ಸಂತೋಷ್ ನಾಯ್ಕ ಸೇರಿದಂತೆ ಅನೇಕ ಬಂಜಾರ ಸಮುದಾಯ ಮುಖಂಡರು ಉಪಸ್ಥಿತರಿದ್ದರು.

error: Content is protected !!