ಮಣಿಪುರದಲ್ಲಿ ಹೆಣ್ಣುಮಕ್ಕಳ ಬೆತ್ತಲೆ ಮೆರವಣಿಗೆ: ಎಐಡಿಎಸ್‌ಓ ಖಂಡನೆ

ದಾವಣಗೆರೆ, ಜು.21- ಮಣಿಪುರದಲ್ಲಿ ಇಬ್ಬರು ಹೆಣ್ಣುಮಕ್ಕಳ ಬೆತ್ತಲೆ ಮೆರವಣಿಗೆ ಮತ್ತು ಅತ್ಯಾಚಾರ ಪ್ರಕರಣವನ್ನು ಎಐಡಿಎಸ್‌ಓ ರಾಜ್ಯ ಕಾರ್ಯದರ್ಶಿ ಅಜಯ್ ಕಾಮತ್ ತೀವ್ರವಾಗಿ ಖಂಡಿಸಿದ್ದಾರೆ. ಘಟನೆಯು ಅತೀವ ಸಂಕಟ ಉಂಟು ಮಾಡಿದೆ. ಸಮುದಾಯದ ಹೆಸರಿನಲ್ಲಿ ಜನಗಳ ಸಾಮೂಹಿಕ ಹತ್ಯೆ, ದಾಳಿಗಳು, ಅತ್ಯಾಚಾರ, ಗುಂಪು ಅತ್ಯಾಚಾರ ಇವುಗಳು ಮಣಿಪುರದಲ್ಲಿ ಕಳೆದ ಎರಡು ತಿಂಗಳುಗಳಿಂದ ಎಡೆಬಿಡದೆ ನಡೆಯುತ್ತಿದ್ದು, ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರ್ಕಾರಗಳ ನೀತಿಗಳು, ಸಮುದಾಯಗಳ ನಡುವೆ ವಿಭಜನೆಯನ್ನು ಉಂಟು ಮಾಡಿ ಮಣಿಪುರ ಹೊತ್ತಿ ಉರಿಯಲು ಕಾರಣವಾಗಿದೆ ಎಂದಿದ್ದಾರೆ.

ಮಣಿಪುರದಲ್ಲಿ ನಡೆಯುತ್ತಿರುವ ಪ್ರಕ್ಷುಬ್ದತೆಯನ್ನು ಬಿಜೆಪಿ ಸರ್ಕಾರ ಹೇಗೆ ನಿಭಾಯಿಸಿದೆ ಎನ್ನುವುದಕ್ಕೆ, ಆ ಹೆಣ್ಣುಮಕ್ಕಳ ಸ್ಥಿತಿಯೇ ಸಾಕ್ಷಿಯಾಗಿದೆ. ಸರ್ಕಾರವು ತನ್ನ ಅಜೆಂಡಾವನ್ನು ಮುಂದುವರಿಸಲು, ವೈಷಮ್ಯ ಸೃಷ್ಟಿಸಿ, ಆ ಮೂಲಕ ಸಮುದಾಯಗಳ ನಡುವಿನ ವಿಭಜನೆಯನ್ನು ಪ್ರೋತ್ಸಾಹಿಸಿದ್ದಾರೆ. ಸರ್ಕಾರದಿಂದ ಸಾಂತ್ವನದ ಮಾತುಗಳು ಅತ್ಯಂತ ಸಾಮಾನ್ಯ ರೀತಿಯದ್ದಾಗಿದ್ದು, ವಿಳಂಬವಾಗಿದೆ.

ಸಮುದಾಯದ ಹೆಸರಿನಲ್ಲಿ ಮಣಿಪುರದಲ್ಲಿ ನಡೆಯುತ್ತಿರುವ ಪ್ರತಿಯೊಂದು ಹಿಂಸಾಚಾರಗಳು ಮಾನವೀಯತೆ, ನಾಚಿಕೆಪಡುವಂತಹ ಸಂಗತಿಯಾಗಿದೆ ಎಂದು ಹೇಳಿದ್ದಾರೆ. 

ಇವು ಸ್ವಯಂಪ್ರೇರಿತವಾಗಿ ನಡೆಯುವ ಘರ್ಷಣೆಗಳಲ್ಲ ಬದಲಿಗೆ ಆಳುವ ವರ್ಗದ ಕೈವಾಡ. ನೇತಾಜಿಯವರ ಐಎನ್‍ಎಯನ್ನು ಅಪಾರ ಗೌರವ ಮತ್ತು ದೇಶಭಕ್ತಿಯಿಂದ ಸ್ವಾಗತಿಸಿದ ರಾಜ್ಯ ಇಂತಹ ಸ್ಥಿತಿಗೆ ಬಂದಿರುವುದು ನೋವಿನ ಸಂಗತಿ. 

ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಐಎನ್‍ಎ ಸೈನಿಕರನ್ನು ಬೆಂಬಲಿಸಲು ಆ ನೆಲವು ಮಾನವೀಯತೆಯಿಂದ ಒಗ್ಗೂಡಿತ್ತು. ಇಂದಿಗೂ ದೇಶದ ಜನರು ನೇತಾಜಿಯನ್ನು ತಮ್ಮ ಹೃದಯದಲ್ಲಿ ಗೌರವಯುತವಾಗಿ ಇಟ್ಟುಕೊಂಡಿದ್ದಾರೆ. ಈ ಸಂದರ್ಭದಲ್ಲಿ ಮಾನವತೆಯನ್ನು ಉಳಿಸಲು ಜನರೆಲ್ಲ ಮುಂದೆ ಬರಬೇಕೆಂದು ಎಐಡಿಎಸ್‌ಓ ಮನವಿ ಮಾಡುತ್ತದೆ. ಅನ್ಯರಲ್ಲಿ ಒಡಕುಗಳನ್ನು ಸೃಷ್ಟಿಸುವ ಸರ್ಕಾರಗಳ ವಿರುದ್ಧ ಒಗ್ಗಟ್ಟಿನಿಂದ ಹೋರಾಡಲು ಕರೆ ನೀಡಿದೆ ಎಂದು ತಿಳಿಸಿದ್ದಾರೆ.

error: Content is protected !!