ದಾವಣಗೆರೆ, ಜು. 19- ಆನ್ಲೈನ್ ನಲ್ಲಿ ಕಂಪನಿಯೊಂದರ ಪ್ರಾಡಕ್ಟ್ಗಳನ್ನು ಖರೀದಿಸಿ, ಆನ್ಲೈನ್ ಮೂಲಕವೇ ಮಾರಾಟ ಮಾಡಿ ಲಾಭ ಗಳಿಸಬಹುದೆಂದು ನಂಬಿಸಿ ಮಹಿಳೆಯೊಬ್ಬರಿಗೆ 18.60 ಲಕ್ಷ ರೂ.ಗಳನ್ನು ವಂಚಿಸಿ ಘಟನೆ ನಡೆದಿದೆ.
ಕಿರುವಾಡಿ ಲೇ ಔಟ್ ವಾಸಿ ಶ್ರೀಮತಿ ಜ್ಯೋತಿ ವಂಚನೆಗೊಳಗಾದ ಮಹಿಳೆ. ಇವರಿಗೆ ಟೆಲಿಗ್ರಾಂ ಆಪ್ ಮೂಲಕ ಮನೆಯಲ್ಲಿಯೇ ಆನ್ಲೈನ್ ನಲ್ಲಿ `ಸಫೈರ್ ಫುಡ್ಸ್ ಲಿಮಿಟೆಡ್’ ಕಂಪನಿಯ ವಸ್ತುಗಳನ್ನು ಖರೀದಿಸಿ, ಮಾರಾಟ ಮಾಡಿದರೆ ಕಮೀಷನ್ ರೂಪದಲ್ಲಿ ಹಣ ನೀಡುವುದಾಗಿ ಸಂದೇಶವೊಂದು ಬಂದಿದೆ.
ಸಂದೇಶದಲ್ಲಿನ ಲಿಂಕ್ ಒತ್ತಿದ ಮಹಿಳೆ, ಮೊಬೈಲ್ ಮೂಲಕ ಲಾಗಿನ್ ಆದಾಗ ಅವರ ಖಾತೆಗೆ 1 ಸಾವಿರ ರೂ. ಕಂಪನಿಯಿಂದ ಜಮೆಯಾಗಿದೆ. ನಂತರ ಜುಲೈ 1ರಂದು ಕಂಪನಿಯ ಪ್ರಾಡಕ್ಟ್ ಖರೀದಿಸಲು 10 ಸಾವಿರ ರೂ. ಆನ್ಲೈನ್ ಮೂಲಕ ಹಣ ಕಳುಹಿಸಿದಾಗ 13,960 ರೂ. ಖಾತೆಗೆ ಜಮೆಯಾಗಿದೆ.
ಅದೇ ರೀತಿ ಮತ್ತೆ 10 ಸಾವಿರ ರೂ. ಹಣ ಕಳುಹಿಸಿದಾಗ 11,982 ರೂ. ಜಮೆಯಾಗಿದೆ. ನಂತರ ಅಪರಿಚಿತ ವ್ಯಕ್ತಿಯೊಬ್ಬ ಕರೆ ಮಾಡಿ ಹೆಚ್ಚು ಪ್ರಾಡಕ್ಟ್ ಖರೀದಿಸಿದರೆ ಹೆಚ್ಚು ಕಮೀಷನ್ ಪಡೆಯಬಹುದು ಎಂದು ನಂಬಿಸಿದಾಗ ಅವರು ಜು.2ರಿಂದ 5ನೇ ತಾರೀಖಿನ ವರೆಗೆ ಹಂತ ಹಂತವಾಗಿ ಹಣ ಕಳುಹಿದ್ದಾರೆ.
ಆದರೆ ಯಾವುದೇ ಕಮೀಷನ್ ಬಾರದ ಕಾರಣ, ಕರೆ ಮಾಡಿ ಪ್ರಶ್ನಿಸಿದಾಗ ಆ ವ್ಯಕ್ತಿ ನಿಮ್ಮ ಖಾತೆಗೆ 23 ಲಕ್ಷ ರೂ. ಕಮಿಷನ್ ಜಮೆ ಮಾಡಲು ಪ್ರಯತ್ನಿಸುತ್ತಿದ್ದು. ಜಮೆಯಾಗುತ್ತಿಲ್ಲ. ಅದಕ್ಕಾಗಿ ಸೇಫ್ಟಿ ಡಿಪಾಸಿಟ್ ಎಂದು 2.62 ಲಕ್ಷ ಹಣ ಕಳುಹಿಸಿ ಎಂದಾಗ ಅವರು ಮತ್ತೆ ಹಣ ಕಳುಹಿಸಿದ್ದಾರೆ. ಒಟ್ಟಾರೆ ಸತತವಾಗಿ 18,66,157 ರೂ.ಗಳನ್ನು ಹಣ ನೀಡಿ ನಂತರ ತಾವು ವಂಚನೆಗೊಳಗಾಗಿರುವುದು ತಿಳಿದು ನ್ಯಾಷನಲ್ ಸೈಬರ್ ಕ್ರೈಂ ಪೋರ್ಟಲ್ನಲ್ಲಿ ದೂರು ದಾಖಲಿಸಿದ್ದಾರೆ.