21ರಂದು ನರಗುಂದದಲ್ಲಿ ರೈತರ ಬೃಹತ್ ಸಮಾವೇಶ

ದಾವಣಗೆರೆ, ಜು. 17- ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ನರಗುಂದ-ನವಲಗುಂದದ 43 ನೇ ರೈತ ಹುತಾತ್ಮ ದಿನಾಚರಣೆ ಅಂಗವಾಗಿ ಇದೇ ದಿನಾಂಕ 21 ರಂದು ಬೆಳಿಗ್ಗೆ 11 ಗಂಟೆಗೆ ನರಗುಂದ ವೀರಗಲ್ಲಿನ ಹತ್ತಿರ ರೈತರ ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ರಾಜ್ಯ ಕಾರ್ಯಾಧ್ಯಕ್ಷ ಕುರುವ ಗಣೇಶ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ರೈತ ವಿರೋಧಿ ಕೃಷಿ ಕಾಯ್ದೆಗಳನ್ನು ವಾಪಾಸ್ಸು ಪಡೆಯಬೇಕು. ರಾಜ್ಯದಲ್ಲಿ ಎದುರಾಗಿರುವ ಭೀಕರ ಬರಗಾಲವನ್ನು ಸಮರ್ಥವಾಗಿ ನಿಭಾಯಿಸದ, ಅತಿವೃಷ್ಟಿಯಿಂದ ಬೆಳೆ ಹಾನಿಯಾಗಿರುವ ರೈತರಿಗೆ ಪರಿಹಾರ ನೀಡದ, ಸಂಪೂರ್ಣ ಕೃಷಿ ಸಾಲ ಮನ್ನಾ ಮಾಡದ, ರೈತರ ಬೆಳೆಗಳಿಗೆ ಯೋಗ್ಯ ಬೆಲೆ ನಿಗದಿ ಮಾಡದ, ಮಹಾದಾಯಿ, ಕಳಸಾ ಬಂಡೂರಿ ಸಮಗ್ರ ನೀರಾವರಿ ಯೋಜನೆ ಜಾರಿ ಮಾಡದ ಸರ್ಕಾರಗಳ ವಿರುದ್ಧ ಹೋರಾಟದ ರೂಪುರೇಷೆಗಳನ್ನು ಸಮಾವೇಶದಲ್ಲಿ ಸಿದ್ಧಪಡಿಸಲಾಗುವುದು ಎಂದರು.

ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆ ಗಳನ್ನು ನಮ್ಮ ರೈತ ಸಂಘ ಸ್ವಾಗತಿಸುತ್ತದೆ. ಆದರೆ ರೈತರ ಪರವಾದ ಯೋಜನೆಗಳನ್ನು ರೂಪಿಸದೇ ಕಡೆಗಣಿಸಿರುವುದು ಎಷ್ಟು ಸರಿ? ಎಂದು ಪ್ರಶ್ನಿಸಿದರು. ಅನ್ನಭಾಗ್ಯ ಯೋಜನೆಗೆ ಹೊರ ರಾಜ್ಯದಿಂದ ಅಕ್ಕಿ ಖರೀದಿ ಮಾಡುವ ಸರ್ಕಾರದ ನಿಲುವಿಗೆ ರೈತ ಸಂಘ ವಿರೋಧಿಸುತ್ತದೆ. ನಮ್ಮ ರಾಜ್ಯದಲ್ಲೇ ರೈತರಿಂದಲೇ ಖರೀದಿಸಿದರೆ ರೈತರಿಗೂ ಜೀವನಕ್ಕೆ ತುಂಬಾ ಅನುಕೂಲವಾಗುತ್ತದೆ. ಈ ಬಗ್ಗೆ ಸರ್ಕಾರ ಗಂಭೀರವಾಗಿ ಚಿಂತನೆ ಮಾಡಬೇಕೆಂದರು.

ಈ ಬಾರಿ ಬಜೆಟ್‌ನಲ್ಲಿ ರೈತರಿಗೆ ಉಪಯೋಗವಾಗುವ ಯಾವುದೇ ಯೋಜನೆ ಕೂಡ ಇಲ್ಲ. ಬಡ್ಡಿ ರಹಿತ ಸಾಲವನ್ನಾದರೂ ಗ್ಯಾರಂಟಿ ಯೋಜನೆಯನ್ನಾಗಿ ಘೋಷಿಸಿ. ರೈತರ ಬೆಳೆಗಳಿಗೆ ವೈಜ್ಞಾನಿಕ ಬೆಲೆ ನಿಗದಿ ಮಾಡಿ ಎಂದು ಒತ್ತಾಯಿಸಿದರು.

ರೈತ ತಾನು ಬೆಳೆದ ಬೆಳೆಗಳಿಗೆ ವೈಜ್ಞಾನಿಕ ಬೆಲೆ ಮತ್ತು ಸಾಲ ಸಿಗದೇ ಆತ್ಮಹತ್ಯೆ ಹಾದಿ ಹಿಡಿಯುತ್ತಿದ್ದಾನೆ. ಯಾವ ಸರ್ಕಾರಗಳು ಸಹ ರೈತರ ಬಗ್ಗೆ ಕಾಳಜಿ ವಹಿಸುತ್ತಿಲ್ಲ ಎಂದು ದೂರಿದರು.

ಬಗರ್ ಹುಕ್ಕುಂ ಸಾಗುವಳಿದಾರರನ್ನು ಒಕ್ಕಲೆಬ್ಬಿಸಬಾರದು ಮತ್ತು ಅರಣ್ಯ ನೀತಿಯನ್ನು ಸರಳೀಕರಣ ಮಾಡಿ ರೈತರಿಗೆ, ಸಾಗುವಳಿದಾರರಿಗೆ ಹಕ್ಕುಪತ್ರ ನೀಡಬೇಕು. ಕೊಬ್ಬರಿಗೆ ಬೆಂಬಲ ಬೆಲೆಯಾಗಿ 15 ಸಾವಿರ ರೂ. ನಿಗದಿ ಮಾಡಿ ಖರೀದಿಸುವಂತೆ ಕಾನೂನು ಬದ್ಧಗೊಳಿಸಬೇಕೆಂದರು.

ಪತ್ರಿಕಾಗೋಷ್ಠಿಯಲ್ಲಿ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಹೊನ್ನೂರು ಮುನಿಯಪ್ಪ, ಜಿಲ್ಲಾಧ್ಯಕ್ಷ ಪಿ.ಸಿ. ಮರುಳಸಿದ್ಧಯ್ಯ, ಷಣ್ಮುಖಪ್ಪ, ಬೀರಪ್ಪ, ಅಣ್ಣಪ್ಪ, ಅಭಿಲಾಷ್ ಮತ್ತಿತರರು ಉಪಸ್ಥಿತರಿದ್ದರು.

error: Content is protected !!