ಅವೈಜ್ಞಾನಿಕ ಶುಲ್ಕ ನೀತಿ ಖಂಡಿಸಿ ದಾವಿವಿಗೆ ಮುತ್ತಿಗೆ ಹಾಕಿ ಪ್ರತಿಭಟನೆ

ದಾವಣಗೆರೆ, ಜು.17- ದಾವಣಗೆರೆ ವಿಶ್ವವಿದ್ಯಾಲಯದ ಕುಲಪತಿ ಹಾಗೂ ಕುಲಸಚಿವರ ಏಕಪಕ್ಷೀಯ ನಿರ್ಧಾರದಿಂದ ಜಾರಿಗೆ ಬಂದಿರುವ ಹೆಚ್ಚುವರಿ ಶುಲ್ಕ, ಅವೈಜ್ಞಾನಿಕ ಕಾರ್ಯಯೋಜನೆಗಳನ್ನು ಖಂಡಿಸಿ, ವಿವಿಧ ಪ್ರಗತಿ ಪರ ಸಂಘಟನೆಗಳ ಸಹಯೋಗದಲ್ಲಿ ದಾವಣಗೆರೆ ವಿವಿ ಮುತ್ತಿಗೆ ಹಾಕಿ ಪ್ರತಿಭಟಿಸುವುದಾಗಿ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ-ಕೆ ದ ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ.ಕೆ.ಎ. ಓಬಳೇಶ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಸರ್ಕಾರ ಶಿಕ್ಷಣ ಬಲಪಡಿಸಲು ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಅಲ್ಲದೇ ಸರ್ಕಾರಿ ಕಾಲೇಜುಗಳಿಗೆ ಪ್ರವೇಶ ಕೋರಿ ಬರುವ ಯಾವುದೇ ವಿದ್ಯಾರ್ಥಿಗಳಿಗೆ ಪ್ರವೇಶಾತಿ ನಿರಾಕರಿಸದೇ ಪ್ರವೇಶ ನೀಡಬೇಕು ಎಂದು ತಿಳಿಸಿದೆ. ಆದರೆ ದಾವಣಗೆರೆ ವಿವಿ ಮಾತ್ರ ಪ್ರವೇಶ ಕೋರಿ ಬರುವ ವಿದ್ಯಾರ್ಥಿಗಳಿಗೆ ಮೂರು ಪಟ್ಟು ಹೆಚ್ಚು ಶುಲ್ಕ ವಸೂಲಿ ಮಾಡಲಾಗುತ್ತಿದೆ ಎಂದು ದೂರಿದರು.

ಸರ್ಕಾರದ ಆದೇಶ ಇಲ್ಲದೇ ಸ್ವಯಂ ಪ್ರೇರಿತವಾಗಿ ಶುಲ್ಕ ಹೆಚ್ಚಳ ಮಾಡುವುದು ಸರಿಯಲ್ಲ. ಸಿಂಡಿಕೇಟ್ ಸಭೆಯಲ್ಲಿ ಚರ್ಚಿಸದೇ ಯಾವುದೇ ಕಾನೂನು ರೂಪಿಸುವುದು ಸರಿಯಲ್ಲ. 

ಈ ಕೂಡಲೇ ದಾವಣಗೆರೆ ವಿವಿ ತನ್ನ ಅವೈಜ್ಞಾನಿಕ ಶುಲ್ಕ ನೀತಿ ಪಡೆಯಬೇಕು. ಇಲ್ಲವಾದರೆ ಮಾನವ ಹಕ್ಕುಗಳ ಆಯೋಗಕ್ಕೆ ದೂರು ಸಲ್ಲಿಸಲಾಗುವುದು  ಎಂದು ಎಚ್ಚರಿಸಿದರು.

ದಾವಣಗೆರೆ ವಿವಿ ಕುಲಪತಿ, ಕುಲಸಚಿವರ ಅವೈಜ್ಞಾನಿಕ ನೀತಿಯಿಂದ ಸಾವಿರಾರು ಸಂಖ್ಯೆಯ ಅತಿಥಿ ಉಪನ್ಯಾಸಕರು ಕರ್ತವ್ಯದಿಂದ ಬಿಡುಗಡೆ ಹೊಂದಿ ಸಂಬಳವಿಲ್ಲದೇ ಆತಂಕಕ್ಕೆ ಒಳಗಾಗಿದ್ದಾರೆ. 

ಕಡಿಮೆ ಸಂಖ್ಯೆಯಲ್ಲಿ ಇರುವ ಖಾಯಂ ಅಧ್ಯಾಪಕರ ಮುಂದೆ ಪದವಿ ಪರೀಕ್ಷೆ ನಡೆಸುವುದು ಕಷ್ಟವಾಗಿದೆ. ಇದರ ನಡುವೆ ಪರೀಕ್ಷಾ ಮೌಲ್ಯಮಾಪನ ಕಾರ್ಯದಿಂದಾಗಿ ತರಗತಿಯಲ್ಲಿ ಬೋಧನೆ ಮಾಡಲು ಅಧ್ಯಾಪಕರಿಲ್ಲದೇ ಪರಿತಪಿಸುವಂತಾಗಿದೆ ಎಂದು ಕಿಡಿಕಾರಿದರು.

ಪತ್ರಿಕಾಗೋಷ್ಠಿಯಲ್ಲಿ ಹೆಚ್. ಮಲ್ಲೇಶ್, ಎಲ್.ಆರ್. ಚಂದ್ರಪ್ಪ, ಮಹಾಂತೇಶ್ ಅಗಡಿ, ಪುರಂದರ್ ಲೋಕಿಕೆರೆ, ವೆಂಕಟೇಶ್ ಬಾಬು ಉಪಸ್ಥಿತರಿದ್ದರು.

error: Content is protected !!