ರಾಣೇಬೆನ್ನೂರು, ಜು. 17- ಅಧಿಕಾರ ದುರ್ಬಳಕೆ ಹಾಗೂ ಹಣ ವಸೂಲಿ ದೂರುಗಳನ್ನು ಆಧರಿಸಿ ರಾಣೇಬೆನ್ನೂರು ಗೃಹರಕ್ಷಕ ದಳದ ಸೀನಿಯರ್ ಪ್ಲಟೂನ್ ಕಮಾಂಡರ್ ಹಾಗೂ ಪ್ರಭಾರ ಘಟಕಾಧಿಕಾರಿ ಎ.ಎಂ. ಕುಂಚೂರ ಅವರನ್ನು ಸದಸ್ಯತ್ವದಿಂದ ಸಮಾಲೋಪನೆಗೊಳಿಸಿರುವುದಾಗಿ ಗೃಹರಕ್ಷಕ ದಳದ ಆರಕ್ಷಕ ಮಹಾ ನಿರ್ದೇಶಕರು ಆದೇಶಿಸಿದ್ದಾರೆ.
ಎರಡು ಕಡೆ ಕರ್ತವ್ಯ ನಿರ್ವಹಿಸಿ ಭತ್ಯೆ ಪಡೆದ, ಸಮಾದೇಷ್ಟರ ಆದೇಶವಿಲ್ಲದೆ ನಿವೃತ್ತರನ್ನು ನಿಯೋಜಿಸಲು, ಗೃಹ ರಕ್ಷಕರಿಂದ ಹಣ ವಸೂಲಿ ಮುಂತಾದ ದೂರುಗಳು ಬಂದಿದ್ದನ್ನು ಆಧರಿಸಿ ಜಿಲ್ಲಾ ಪೊಲೀಸ್ ಅಧೀಕ್ಷಕರು ತನಿಖೆ ನಡೆಸಿ ನೀಡಿದ ವರದಿ ಹಾಗೂ ಸದರಿಯವರು ನೀಡಿದ ಸಮಜಾಯಿಷಿ ಸಮಂಜಸವಾಗಿಲ್ಲದ್ದನ್ನು ಆಧರಿಸಿ ಈ ಆದೇಶ ನೀಡಲಾಗಿದೆ.
ಸದರಿಯವರನ್ನು ಸದಸ್ಯತ್ವದಿಂದ ಸಮಾಲೋಪನೆಗೊಳಿಸಿ, ನಿಯಮಾನುಸಾರ ಸಮವಸ್ತ್ರ, ಸಾಮಗ್ರಿ ಮತ್ತು ಗುರುತಿನ ಚೀಟಿ ಹಿಂಪಡೆಯಬೇಕು. ಸಂಬಂಧಿಸಿದ ವಿವರಗಳನ್ನು ನಮೂದಿಸಿ, ಅನುಸರಣಾ ವರದಿ ಸಲ್ಲಿಸುವಂತೆ ಹಾವೇರಿ ಜಿಲ್ಲಾ ಪೊಲೀಸ್ ಅಧೀಕ್ಷಕರಿಗೆ ಸೂಚಿಸಿದ್ದಾರೆ.