ರಾಣೇಬೆನ್ನೂರು, ಜು.17- ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಾಲಮನ್ನಾ ಯೋಜನೆ ಘೋಷಿಸಿ ದರೆ ಮಾತ್ರ ರೈತರ ಆತ್ಮಹತ್ಯೆ ತಡೆ ಹಿಡಿಯಲು ಸಾಧ್ಯ ಎಂದು ರೈತ ಮುಖಂಡ ರವೀಂದ್ರಗೌಡ ಎಫ್. ಪಾಟೀಲ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜೂನ್ ಮತ್ತು ಜುಲೈ ಈ ಎರಡೂ ತಿಂಗಳಲ್ಲಿ ರಾಜ್ಯದಲ್ಲಿ ‘50’ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹಾವೇರಿ ಜಿಲ್ಲೆಯೊಂದರಲ್ಲಿಯೇ ‘18’ ಜನ ರೈತರು ಆತ್ಮಹತ್ಯೆ ಮಾಡಿಕೊಂಡಿರುವುದು ಮುಂಗಾರು ಮಳೆ ಕೈಕೊಟ್ಟಿರುವುದೇ ಮುಖ್ಯ ಕಾರಣವಾಗಿದೆ ಎಂದರು.
ಮಳೆ ಬಾರದ ಜಿಲ್ಲೆಗಳನ್ನು ಈ ಕೂಡಲೇ ಸರ್ಕಾರ ತುರ್ತಾಗಿ ಬರಗಾಲ ಪೀಡಿತ ಜಿಲ್ಲೆಗಳೆಂದು ಘೋಷಿಸಿ, ದಲಾಲರು ಮತ್ತು ಕೆಲವು ಖಾಸಗಿ ಫೈನಾನ್ಸ್‍ಗಳ ಕಿರುಕುಳ ತಾಳದೆ ರೈತರು ಪೊಲೀಸ್ ಠಾಣೆಗೆ ದೂರು ಕೊಟ್ಟಿದ್ದಾರೆ. ಪೊಲೀಸ್ ಇಲಾಖೆ ಆ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ, ರೈತರ ನೆರವಿಗೆ ನಿಂತಾಗ ಮಾತ್ರ ರೈತರಿಗೆ ಆತ್ಮಸ್ಥೈರ್ಯ ಬರುತ್ತದೆ ಎಂದು ಹೇಳಿದರು.
ರೈತ ಆತ್ಮಹತ್ಯೆ ಪ್ರಕರಣಗಳಲ್ಲಿ ದೇಶದಲ್ಲಿಯೇ ಕರ್ನಾಟಕ ಎರಡನೇ ಸ್ಥಾನದಲ್ಲಿರುವುದು ದುರ್ದೈವದ ಸಂಗತಿ. ರಕ್ಷಿಸಬೇಕಾದ ಇಲಾಖೆಗಳು ಉಳ್ಳವರ ಪರವಾಗಿ ನಿಂತರೆ ರೈತ ಸಹಜವಾಗಿ ಧ್ಯೆರ್ಯ ಕಳೆದುಕೊಳ್ಳುತ್ತಾನೆ. ರೈತ ಆತ್ಮಹತ್ಯೆ ತಡೆಗೆ ಇದು ಕೂಡ ಸಹಕಾರಿಯಾಗಲಿದೆ ಎಂದು ಪಾಟೀಲರು ತಿಳಿಸಿದರು.
ಟ್ರ್ಯಾಕ್ಟರ್‍ಗಳಿಗೆ ಸಾಲ ನೀಡಿದ ಕೆಲವು ಫೈನಾನ್ಸ್‍ಗಳ ದೌರ್ಜನ್ಯ ಮತ್ತು ಆರ್ಥಿಕ ಪರಿಸ್ಥಿತಿಯ ದುರ್ಲಾಭ ಪಡೆದ ಕೆಲವು ದಲಾಲರು ಬಲತ್ಕಾರದಿಂದ ರೈತರ ಜಮೀನುಗಳನ್ನು ತಮ್ಮ ಹೆಸರಿಗೆ ನೋಂದಣಿ ಮಾಡಿಕೊಳ್ಳುವುದು ಕೂಡ ರೈತ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗಲಿಕ್ಕೆ ಕಾರಣವಾಗಿದೆ ಎಂದರು. ಹಾವೇರಿ ಜಿಲ್ಲೆಯ ಜೊತೆಗೆ ಕೆಲವು ಜಿಲ್ಲೆಗಳನ್ನು ಬರಗಾಲ ಪೀಡಿತ ಜಿಲ್ಲೆಗಳೆಂದು ಘೋಷಿಸಿ ವಿಶೇಷ ನೆರವು ನೀಡಬೇಕೆಂದರು.