ರಾಣೇಬೆನ್ನೂರು, ಜು. 17- ಪದವಿ ವಿದ್ಯಾರ್ಥಿಗಳು ಅಧ್ಯಯನದ ಜೊತೆಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಪೂರಕವಾದ ವಿಷಯಗಳ ಬಗ್ಗೆ ಅಧ್ಯಯನ ಮಾಡುವುದು ಅಗತ್ಯವಾಗಿದೆ ಎಂದು ಕನ್ನಡ ವಿಭಾಗದ ಮುಖ್ಯಸ್ಥ ಎನ್.ಜಿ. ಮಂಜುನಾಥ ಹೇಳಿದರು.
ತಾಲ್ಲೂಕಿನ ಸುಣಕಲ್ಲಬಿದರಿ ಶ್ರೀ ಅರಳಿ ಶಿದ್ಲಿಂಗಪ್ಪ ಬಸಪ್ಪ ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದಲ್ಲಿ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ವಿಭಾಗದ ವತಿಯಿಂದ ಹಮ್ಮಿಕೊಂಡಿದ್ದ ಸ್ಪರ್ಧಾತ್ಮಕ ಪರೀಕ್ಷೆಗಳ ಪುಸ್ತಕ ಪ್ರದರ್ಶನ ಹಾಗೂ ಓದು, ಬರಹ ಸುಧಾರಣೆ ಹೇಗೆ ಎಂಬ ವಿಷಯದ ಕುರಿತು ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಇಂದಿನ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವುದು ಕಷ್ಟಕರ. ಹೀಗಾಗಿ ವಿದ್ಯಾರ್ಥಿ ಹಂತದಲ್ಲಿಯೇ ಅದಕ್ಕೆ ಅಗತ್ಯವಿರುವ ವಿಷಯಗಳ ಸಂಗ್ರಹಣೆಯಿಂದ ಪರೀಕ್ಷೆ ಎದುರಿಸಲು ಸಹಕಾರಿಯಾಗುತ್ತದೆ ಎಂದರು.
ಹರಿಹರದ ನಿವೃತ್ತ ಶಿಕ್ಷಕ ಹಾಗೂ ಸಾಹಿತಿ ಕಲೀಂ ಭಾಷಾ ಅವರು ಉಪನ್ಯಾಸ ನೀಡಿದರು. ಪ್ರಾಚಾರ್ಯ ಆರ್.ಎಫ್. ಅಯ್ಯನಗೌಡ್ರು ಅಧ್ಯಕ್ಷತೆ ವಹಿಸಿದ್ದರು. ಗ್ರಂಥಪಾಲಕ ಡಾ. ಎನ್.ಬಿ. ಹನುಮಂತರಾಯ, ಜಿ. ಸವಿತಾ, ಜ್ಯೋತಿ, ನಂದಾ ಹೆಗ್ಗೇರಿ, ಸವಿತಾ ಕುಸಗೂರ ಮತ್ತಿತರರಿದ್ದರು.