ಲೋಕಸಭಾ ಚುನಾವಣೆಗೆ ಸ್ಪರ್ಧೆ

ಲೋಕಸಭಾ ಚುನಾವಣೆಗೆ ಸ್ಪರ್ಧೆ

ಎಸ್.ಎ. ರವೀಂದ್ರನಾಥ್ ಭೇಟಿ ಮಾಡಿದ ಎಂ.ಪಿ. ರೇಣುಕಾಚಾರ್ಯ

ದಾವಣಗೆರೆ, ಜು. 14- ಮುಂಬರುವ ಲೋಕಸಭಾ ಚುನಾವಣೆಗೆ ಅವಕಾಶ ನೀಡಿದರೆ, ಸ್ಪರ್ಧಿಸಲು ಸಿದ್ಧರಿರುವುದಾಗಿ  ಮಾಜಿ ಶಾಸಕ ಎಂ.ಪಿ. ರೇಣುಕಾಚಾರ್ಯ ಹೇಳಿದ್ದಾರೆ.

ತಾಲ್ಲೂಕಿನ ಶಿರಮಗೊಂಡನಹಳ್ಳಿಯಲ್ಲಿ ಮಾಜಿ ಸಚಿವ, ಬಿಜೆಪಿ ಹಿರಿಯ ಮುಖಂಡ ಎಸ್.ಎ. ರವೀಂದ್ರನಾಥ್ ಅವರನ್ನು ಭೇಟಿ ಮಾಡಿದ ಬಳಿಕ ಅವರು ಪತ್ರಕರ್ತರೊಂದಿಗೆ ಮಾತನಾಡಿದ್ದಾರೆ.

ಹಿರಿಯರಾದ ರವೀಂದ್ರನಾಥ್ ಅವರನ್ನು ಭೇಟಿ ಮಾಡಿ ನನ್ನ ಭಾವನೆಗಳನ್ನು ವ್ಯಕ್ತಪಡಿಸಿದ್ದೇನೆ. ಸಹಕಾರ ಕೋರಿದ್ದೇನೆ. ಪಕ್ಷ ಅವಕಾಶ ಮಾಡಿಕೊಟ್ಟರೆ, ಸ್ಪರ್ಧೆಗೆ ಸಿದ್ದನಿದ್ದೇನೆ ಎಂದು ರೇಣುಕಾಚಾರ್ಯ ಹೇಳಿದರು.

ದಾವಣಗೆರೆ ಲೋಕಸಭೆಗೆ 8 ವಿಧಾನಸಭಾ ಕ್ಷೇತ್ರಗಳು ಬರುತ್ತವೆ. ಎಲ್ಲಾ ಕ್ಷೇತ್ರಗಳಿಂದಲೂ ಕಾರ್ಯಕರ್ತರು, ಮುಖಂಡರು ಕರೆ ಮಾಡಿ ಮಾತನಾಡುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ನನ್ನ ಹೆಸರು ನಮೂದಿಸುತ್ತಿದ್ದಾರೆ ಎಂದು ಹೇಳಿದರು.

ಸಿದ್ದೇಶ್ವರಣ್ಣ ಹಿರಿಯರಿದ್ದಾರೆ. ಅವರು ಸ್ಪರ್ಧೆ ಮಾಡು ತ್ತೇನೆ ಎಂದಿದ್ದಾರೆ. ಅವರು ಕಣಕ್ಕಿಳಿದರೆ ಗೆಲುವಿಗೆ ಶ್ರಮಿಸುತ್ತೇನೆ. ಆದಷ್ಟು ಬೇಗ ಅಭ್ಯರ್ಥಿ ಯಾರೆಂಬುದನ್ನು ಘೋಷಿಸಬೇಕು. ವಿಧಾನಸಭೆ ಚುನಾವಣೆಗೆ ತಡ ಮಾಡಿದಂತೆ ಇಲ್ಲಿ ಮಾಡಬಾರದು ಎಂದು ಒತ್ತಾಯಿಸಿದರು.

ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ಲೋಕಸಭೆ ಚುನಾವಣೆಗಳು ನಮ್ಮ ಮುಂದಿವೆ.  ಅದಕ್ಕೆ ಈಗಿನಿಂದಲೇ ಸಿದ್ಧತೆ ಮಾಡಿಕೊಳ್ಳಬೇಕಿದೆ. ಹಾಗಾಗಿ, ಬಿಜೆಪಿ ರಾಜ್ಯಾಧ್ಯಕ್ಷರು ಹೊಸಬರು ಆಗಬೇಕು. ಕೆಳಮನೆ, ಮೇಲ್ಮನೆಯಲ್ಲಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಹೋರಾಡಬೇಕಿದೆ. ಈ ನಿಟ್ಟಿನಲ್ಲಿ ಆದಷ್ಟು ಬೇಗ ರಾಜ್ಯಾಧ್ಯಕ್ಷರ ಆಯ್ಕೆಯಾಗಬೇಕು ಎಂದಿರುವ ರೇಣುಕಾಚಾರ್ಯ, ಇದು ಕೇವಲ ನನ್ನೊಬ್ಬನ ಒತ್ತಾಯವಲ್ಲ.  ನಾಡಿನ ಬಿಜೆಪಿ ಕಾರ್ಯಕರ್ತರು ಹಾಗೂ ಜನರ ಒತ್ತಾಸೆಯಾಗಿದೆ. ಪಕ್ಷದ ನಾಯಕರು ಆದಷ್ಟು ಬೇಗ ನೇಮಕ ಮಾಡುತ್ತಾರೆ ಎಂಬ ವಿಶ್ವಾಸವಿದೆ ಎಂದರು.

ಕಾಂಗ್ರೆಸ್ ಸೇರಲ್ಲ, ಬಿಜೆಪಿ ಬಿಡಲ್ಲ:  ನಾನು ಯಾವುದೇ ಕಾರಣಕ್ಕೂ ಬಿಜೆಪಿ ಪಕ್ಷ ಬಿಡುವುದಿಲ್ಲ. ಪಕ್ಷವು ನನಗೆ ಎಲ್ಲವನ್ನೂ ನೀಡಿದೆ. ನಾನು ಕಾಂಗ್ರೆಸ್ ಸೇರುತ್ತೇನೆ ಎಂಬುದಾಗಿ ನನ್ನ ರಾಜಕೀಯ ವಿರೋಧಿಗಳು ಅಪಪ್ರಚಾರ ನಡೆಸುತ್ತಿದ್ದಾರೆ ಎಂದು ಮಾಜಿ ಶಾಸಕರು ಪುನರುಚ್ಛರಿಸಿದರು.

 ಜೈನಮುನಿ ಹತ್ಯೆ ಪ್ರಕರಣವನ್ನು ಸಿಬಿಐಗೆ ವಹಿಸಿ:  ಜೈನಮುನಿ ಹತ್ಯೆ ಪ್ರಕರಣ ಖಂಡನೀಯ. ಬರ್ಬರ ಹತ್ಯೆ ನಡೆದಿರುವುದು ದೇಶದ ಪ್ರತಿಯೊಬ್ಬರಿಗೂ ಆಘಾತ ತಂದಿದೆ. ಈ ಪ್ರಕರಣವನ್ನು ಸಿಬಿಐಗೆ ವಹಿಸಲೇಬೇಕು ಎಂದು ಆಗ್ರಹಿಸಿದರು.

ಪಕ್ಷದಿಂದ ಕೊಡಮಾಡಲಾಗಿರುವ ನೋಟಿಸ್‌ಗೆ ಉತ್ತರ ಕೊಡುವುದಿಲ್ಲ ಎಂದು ಮತ್ತೊಮ್ಮೆ ಹೇಳಿರುವ ರೇಣುಕಾಚಾರ್ಯ,  ನಾನು ಪಕ್ಷದ ಮುಖಂಡರು ಹಾಗೂ ಪಕ್ಷದ ವಿರುದ್ದ ಮಾತನಾಡಿಲ್ಲ. ತಪ್ಪು ಮಾಡಿದ್ದರೆ ನೊಟೀಸ್‌ಗೆ ಉತ್ತರ ಕೊಡಬೇಕು. ತಪ್ಪೇ ಮಾಡದಿದ್ದರೆ ಏನೆಂದು ಉತ್ತರಿಸಬೇಕು. ಹಾಗಾಗಿ, ನೋಟಿಸ್‌ಗೆ ಉತ್ತರಿಸುವ ಪ್ರಮೇಯವೇ ಎದುರಾಗದು ಎಂದರು.

error: Content is protected !!