ಜೆ.ಜೆ.ಎಂ. ಮೆಡಿಕಲ್ ಕಾಲೇಜಿನ ವಿದ್ಯಾರ್ಥಿಗಳ ಸಂಘದಿಂದ 76ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಜೆ.ಜೆ.ಎಂ. ಕಾಲೇಜು ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ವರ್ಗದವರಿಗೆ ಮಾನ್ಸೂನ್ ಫಿಯೆಸ್ಟಾ ಕ್ರೀಡೆಗಳನ್ನು ಇಂದಿನಿಂದ ಹಮ್ಮಿಕೊಳ್ಳಲಾಗಿದೆ.
ಕಾಲೇಜಿನ ಪ್ರಾಚಾರ್ಯ ಡಾ.ಎಸ್.ಬಿ. ಮುರುಗೇಶ್ ಅವರ ನೇತೃತ್ವದಲ್ಲಿ ದೇಸೀ ಕ್ರೀಡೆಗಳ ಉತ್ಸವ ಹಮ್ಮಿಕೊಳ್ಳಲಾಗಿದೆ. ಮರೆಯಾಗುತ್ತಿರುವ ದೇಸೀ ಕ್ರೀಡೆಗಳನ್ನು ಆಡಿಸಿ, ಅದನ್ನು ಜೀವಂತವಾಗಿಸುವ ಪ್ರಯತ್ನ ಇದಾಗಿದ್ದು, ಅಂದು ಬೆಳಿಗ್ಗೆ 11 ಗಂಟೆಗೆ ಇಲ್ಲಿನ ಗಾಜಿನ ಮನೆ ಎದುರು ಇರುವ ವೀರಬಸಪ್ಪ ಗದ್ದೆಯಲ್ಲಿ ಕ್ರೀಡಾ ಕೂಟಗಳು ನಡೆಯಲಿದ್ದು, ಮೇಯರ್ ವಿನಾಯಕ ಪೈಲ್ವಾನ್ ಕಾರ್ಯಕ್ರಮಕ್ಕೆ ಚಾಲನೆ ನೀಡುವರು. ಮುಖ್ಯ ಅತಿಥಿಗಳಾಗಿ ಪಾಲಿಕೆ ಸದಸ್ಯ ಗಡಿಗುಡಾಳ ಮಂಜುನಾಥ, ರೈತರಾದ ವೀರಬಸಪ್ಪ, ಕಾಲೇಜಿನ ವಿವಿಧ ವಿಭಾಗಗಳ ಮುಖ್ಯಸ್ಥರು, ವಿದ್ಯಾರ್ಥಿಗಳು ಭಾಗವಹಿಸುವರು.
ಇಂದು ಕೆಸರುಗದ್ದೆಯಲ್ಲಿ ಕೆಸರುಗದ್ದೆ ಓಟ, ಹಗ್ಗ ಜಗ್ಗಾಟ, ವಾಲಿಬಾಲ್, ಥ್ರೋಬಾಲ್ ಕ್ರೀಡೆಗಳು ನಡೆಯಲಿವೆ.
ಇದೇ ದಿನಾಂಕ 23 ರ ಭಾನುವಾರ ಜಿಲ್ಲಾ ಕ್ರೀಡಾಂಗಣದಲ್ಲಿ ಬುಗುರಿ, ಚಿನ್ನಿದಾಂಡು, ಗೋಲಿ, ಲಗೋರಿ, ಕುಂಟಬಿಲ್ಲೆ ಆಟಗಳನ್ನು ಜಿಲ್ಲಾ ಕ್ರೀಡಾಪಟುಗಳ ಸಂಘದ ಅಧ್ಯಕ್ಷ ದಿನೇಶ್ ಕೆ.ಶೆಟ್ಟಿ ಉದ್ಘಾಟಿಸುವರು.
ದಿನಾಂಕ 30 ರ ಭಾನುವಾರ ಜೆ.ಜೆ.ಎಂ. ಮೆಡಿಕಲ್ ಕಾಲೇಜಿನ ಒಳಾಂಗಣ ಕ್ರೀಡಾಂಗಣದಲ್ಲಿ ಚೌಕಾಬಾರ, ಕುರಿ ಮತ್ತು ನರಿ, ಅಳಿಗುಳಿ ಮನೆ ಆಟ ನಡೆಯಲಿದೆ. ಆಗಸ್ಟ್ 6 ರಂದು ಜೆ.ಜೆ.ಎಂ. ಮೆಡಿಕಲ್ ಕಾಲೇಜಿನ ಒಳಾಂಗಣ ಕ್ರೀಡಾಂಗಣದಲ್ಲಿ ಕೇರಂ, ಚೆಸ್, ಟೇಬಲ್ ಟೆನ್ನಿಸ್ ಆಟಗಳನ್ನು ಆಡಿಸಲಾಗುವುದು.