ದಾವಣಗೆರೆ, ಜು.12- ಚಿಕ್ಕೋಡಿಯಲ್ಲಿ ನಡೆದಿರುವ ಜೈನಮುನಿ ಶ್ರೀ ಕಾಮಕುಮಾರ ನಂದಿ ಮಹಾರಾಜರ ಭೀಕರ ಹತ್ಯೆಯನ್ನು ಮುಸ್ಲಿಂ ಬಾಂಧವ್ಯ ವೇದಿಕೆ ತೀವ್ರವಾಗಿ ಖಂಡಿಸಿದೆ.
ಸಮಾಜದಲ್ಲಿ ಅಪರಾಧ ಪ್ರಕರಣಗಳು ಕಳೆದ ಹಲವು ವರ್ಷಗಳಿಂದ ಹೆಚ್ಚಾಗಲು ಕಾನೂನಿನ ಭಯ ಇಲ್ಲದಿರುವುದೇ ಮುಖ್ಯ ಕಾರಣ. ನಿಷ್ಪಕ್ಷಪಾತ ತನಿಖೆ ನಡೆಸಿ, ಅಪರಾಧದಲ್ಲಿ ಭಾಗಿಯಾದ ಆರೋಪಿಗಳನ್ನು ಸಮುದಾಯ, ಧರ್ಮಗಳ ಸೀಮೆಗಳಿಗೆ ಒಳಪಡಿಸದೇ ಸೂಕ್ತ ತನಿಖೆ ನಡೆಸಿ ಕಠಿಣವಾಗಿ ಶಿಕ್ಷಿಸಿಸುವ ಮೂಲಕ ಭವಿಷ್ಯದಲ್ಲಿ ಇಂತಹದ್ದು ನಡೆಯದಂತೆ ನೋಡಿಕೊಳ್ಳಬೇಕಿದೆ ಎಂದು ವೇದಿಕೆ ಅಧ್ಯಕ್ಷ ಅನಿಸ್ ಪಾಷಾ ತಿಳಿಸಿದ್ದಾರೆ.
ಪಕ್ಷ, ಜಾತಿ, ಧರ್ಮಗಳ ಆಧಾರದ ಮೇಲೆ ಅಪರಾಧವೂ ಕೂಡ ಕಾನೂನಿನ ದುರ್ಬಳಕೆಯ ಮೂಲಕ ರಕ್ಷಣೆ ಹೊಂದುತ್ತಾ ಬಂದಿರುವುದು ದುರಂತವೇ ಸರಿ ಎಂದು ಹೇಳಿದ್ದಾರೆ.
ಅಪರಾಧಿಗಳಿಗೆ ಮಾಡುವ ಪ್ರತ್ಯಕ್ಷ, ಪರೋಕ್ಷ ರಕ್ಷಣೆಯೇ ಅಪರಾಧಗಳಿಗೆ ಪ್ರೇರಣೆಯಾಗಿ ಸರ್ವ ಸಮುದಾಯಗಳು ಇದರಿಂದ ಸಂಕಷ್ಟ ಅನುಭವಿಸುವಂತಾಗುತ್ತದೆ. ರಾಜ್ಯದ ನೂತನ ಸರ್ಕಾರ ಈ ಹತ್ಯೆಯನ್ನು ಗಂಭೀರವಾಗಿ ಪರಿಗಣಿಸಿ, ಅಪರಾಧಿಗಳಿಗೆ ಕಾನೂನಿನ ಕುಣಿಕೆಯಿಂದ ತಪ್ಪಿಸಿಕೊಳ್ಳದಂತೆ ಕ್ರಮ ಕೈಗೊಳ್ಳಲಿ ಎಂದು ಒತ್ತಾಯಿಸಿದ್ದಾರೆ.
ಪೊಲೀಸ್ ಇಲಾಖೆ ಕೂಡ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಅನಿಸ್ ಪಾಷಾ ಮತ್ತು ಕಾರ್ಯದರ್ಶಿ ಮುಷ್ತಾಕ್ ಹೆನ್ನಾಬೈಲ್ ಆಗ್ರಹಿಸಿದ್ದಾರೆ.